Kannada Rajyotsava: ಮಣ್ಣಿನ ಮಗಳು ಎಂದ ಕಿರಣ್ ಮಜುಮ್ದಾರ್-ಷಾ - ಮೋಹನ್ ದಾಸ್ ಪೈ ಹೇಳಿದ್ದೇನು ?
ಕನ್ನಡ ರಾಜ್ಯೋತ್ಸವದ ಬಗ್ಗೆ ಉದ್ಯಮಿಗಳಾದ ಕಿರಣ್ ಮಜುಮ್ದಾರ್-ಷಾ ಹಾಗೂ ಮೋಹನ್ ದಾಸ್ ಪೈ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಆದರೆ, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೆಮ್ಮೆಯ ಕನ್ನಡ ಮಣ್ಣಿನ ಮಗಳಾಗಿ, ಕರ್ನಾಟಕದ ಪ್ರತಿಯೊಬ್ಬರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ. ನಮ್ಮೆಲ್ಲರ ಜೀವನಮಟ್ಟ ಸುಧಾರಿಸುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾಗರಿಕ ಜವಾಬ್ದಾರಿಯೊಂದಿಗೆ ನಡೆಯುವ ಆರ್ಥಿಕ ಪ್ರಗತಿಯ ಮೂಲಕ ಕರ್ನಾಟಕವು ಮತ್ತಷ್ಟು ಸಮೃದ್ಧಿಯಾಗಲಿ ಎಂದು ಉದ್ಯಮಿ ಕಿರಣ್ ಮಜುಮ್ದಾರ್ - ಷಾ ಅವರು ಹೇಳಿದ್ದಾರೆ. ಈ ಟ್ವೀಟ್‌ನಲ್ಲಿ ಕಿರಣ್ ಮಜುಮ್ದಾರ್-ಷಾ ಅವರು, "ಮಣ್ಣಿನ ಮಗಳು' ಎನ್ನುವುದನ್ನು ಮಾತ್ರ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಉದ್ಯಮಿ ಮೋಹನ್ ದಾಸ್ ಪೈ ಅವರು, ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ದಿನದ ಶುಭಾಶಯಗಳು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
As a proud ಮಣ್ಣಿನ ಮಗಳು I wish every one in Karnataka a Happy Rajyotsava Day. May we prosper through visible infrastructure and civic responsibility led economic development that improves all our lives.
— Kiran Mazumdar-Shaw (@kiranshaw) November 1, 2026
ಉದ್ಯಮಿಗಳ ಟ್ವೀಟ್ ಬಗ್ಗೆ ನೆಟ್ಟಿಗರು ಹೇಳಿದ್ದೇನು ?
ಉದ್ಯಮಿ ಕಿರಣ್ ಮಜುಮ್ದಾರ್ - ಷಾ ಅವರ ಟ್ವೀಟ್‌ಗೆ ಉಮೇಶ್ ಎನ್ನುವವರು, ಹಾಗಾದರೆ ನೀವು ಕನ್ನಡ ಮತ್ತು ಕನ್ನಡಿಗ ಉದ್ಯೋಗಗಳನ್ನು ಏಕೆ ವಿರೋಧಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉದ್ಯಮಿ ಕಿರಣ್ ಮಜುಮ್ದಾರ್ - ಷಾ ಅವರು, ನೀವು ಕನ್ನಡಿಗರೇ ಅಲ್ಲ ಎಂಬುದು ಸ್ಪಷ್ಟ. ಸುಳ್ಳು ಮಾಹಿತಿಯನ್ನು ಹರಡುತ್ತಿರುವುದರಿಂದ ನೀವು ನಕಲಿ ಕನ್ನಡಿಗರಾಗಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ. ಯತೀಂದ್ರ ಪ್ರಸಾದ್ ಎನ್ನುವವರು, ನಮ್ಮ ರಾಜ್ಯದಲ್ಲಿ ಇಂತಹ ಮಹನೀಯರು ಜನಿಸಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ನಿಮ್ಮ ಅಪಾರ ಕೊಡುಗೆಗೆ ಧನ್ಯವಾದಗಳು. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಎಂದು ಶುಭಕೋರಿದ್ದಾರೆ.
ಇನ್ನು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವೀಟ್‌ಗೆ ಕನ್ನಡದಲ್ಲಿ ಸ್ವಲ್ಪ ಟ್ವೀಟ್ ಮಾಡಿ ನೋಡೋಣ. ಇವತ್ತೊಂದು ದಿನಾನಾದ್ರೂ ಎಂದೂ ಕೆಲವು ಕನ್ನಡಿಗರು ಟ್ವೀಟ್ ಮಾಡಿದ್ದಾರೆ.
Best wishes to All on Karnataka Rajyothsava day
— Mohandas Pai (@TVMohandasPai) November 1, 2026
ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ; ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ
ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ; ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ನಾಡಗೀತೆ ಇರುವಂತೆ, ಕನ್ನಡಿಗರ ಸ್ವಾಭಿಮಾನವನ್ನು ಪ್ರತಿನಿಧಿಸುವ ಅಧಿಕೃತ ನಾಡಧ್ವಜವೂ ಇರಬೇಕೆಂಬುದು ನಮ್ಮ ಆಶಯ. ಈಗಾಗಲೇ ಕನ್ನಡಿಗರ ಭಾವನೆಗಳ ಹೆಗ್ಗುರುತಾಗಿ ಕೆಂಪು-ಹಳದಿ ಬಣ್ಣದ ಬಾವುಟವಿದೆ. ಕನ್ನಡದ ಜ್ಞಾನ ಪರಂಪರೆ, ಸಂಸ್ಕೃತಿ, ಸರ್ವಧರ್ಮ ಸಮಾನತೆ ಹಾಗೂ ಶಾಂತಿಯ ಸಂದೇಶ ಸಾರುವ ಈ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ ನಾಡಧ್ವಜವನ್ನಾಗಿ ಮಾಡುವ ಕುರಿತು ನಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ.
ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಕರ್ನಾಟಕದ ಅಸ್ಮಿತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಈ ನಾಡಧ್ವಜದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ತಾಯ್ನುಡಿಯ ಸೇವೆಯೇ ಶ್ರೇಷ್ಠ ಧರ್ಮ
ನಮ್ಮ ಉಸಿರು ಕನ್ನಡ, ನಮ್ಮ ಹೆಸರು ಕನ್ನಡ, ನಮ್ಮ ಕಸುಬು ಕನ್ನಡ. ಕನ್ನಡ ನುಡಿ ಬಹಳ ಚೆಂದ; ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ. ಜಗದ ಏಳಿಗೆ ಆಗುವುದು ಕರ್ನಾಟಕದಿಂದ ಎಂದು ಕವಿ ದ.ರಾ. ಬೇಂದ್ರೆ ಅವರು ಬಹಳ ಹಿಂದೆಯೇ ಹೇಳಿದ್ದಾರೆ. ಕನ್ನಡ ಕರ್ನಾಟಕದ ದಿಕ್ಸೂಚಿ, ಕರ್ನಾಟಕ ಭಾರತದ ಭವಿಷ್ಯ. ಮಾತೃಭಾಷೆಯ ಮೂಲಕ ಜ್ಞಾನ ಮತ್ತು ಸಂಸ್ಕೃತಿ ಹರಿಯುತ್ತದೆ. ಭಾಷೆ ಅನ್ನುವುದು ಸಂಸ್ಕೃತಿ ಹಾಗೂ ಜ್ಞಾನದ ಪ್ರತಿಬಿಂಬ. ಹೆತ್ತ ತಾಯಿ ಮತ್ತು ಹುಟ್ಟಿದ ನಾಡು ಸ್ವರ್ಗಕ್ಕಿಂತಲೂ ಮಿಗಿಲು.
ನಾವು ಇತರರ ಮನಸ್ಸುಗಳನ್ನು ಕನ್ನಡದ ಮೂಲಕವೇ ಗೆಲ್ಲಬೇಕು. ನಮ್ಮ ದೇಹ ಯಾವ ದೇಶದಲ್ಲಿದ್ದರೂ ಉಸಿರು ಮಾತ್ರ ಕನ್ನಡವಾಗಿರಬೇಕು. ನುಡಿ ಉಳಿದರೆ ನಾಡು ಉಳಿಯುತ್ತದೆ, ನಾಡು ಉಳಿದರೆ ನುಡಿ ಉಳಿಯುತ್ತದೆ. ನಾವು ಆಚರಿಸುತ್ತಿರುವುದು ಬರೀ ರಾಜ್ಯೋತ್ಸವವಲ್ಲ, ಇದು ಕನ್ನಡ ತಾಯಿ ಭುವನೇಶ್ವರಿಯ ಸೇವೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇದು ಮಾತೃಪೂಜೆ. ತಾಯಿನುಡಿಯ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ.
ಮಗು ಹುಟ್ಟಿದಾಗ ತಾಯಿ ಹೇಗೆ ಅದನ್ನು ಪ್ರೀತಿಸುತ್ತಾಳೋ, ಅದೇ ರೀತಿ ನಾವು ನಮ್ಮ ತಾಯಿಭಾಷೆಯನ್ನು ಪ್ರೀತಿಸಬೇಕು. ಕನ್ನಡವನ್ನು ಪ್ರೀತಿಸುವುದು, ತಾಯಿಯನ್ನು ಪ್ರೀತಿಸುವುದು ಎರಡೂ ಒಂದೇ. ಮಾತೃಭಾಷೆಯಲ್ಲಿ ಕಲಿತ ಜ್ಞಾನ ಬಹಳ ಗಟ್ಟಿಯಾಗಿರುತ್ತದೆ. "ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಅದು ಗೋವರ್ಧನಗಿರಿ ಆಗುತ್ತದೆ" ಎಂದು ಕುವೆಂಪು ಅವರು ಹೇಳಿದ್ದಾರೆ. ಅಂದು ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ನಾಡಿನಲ್ಲಿ ಇಂದು ಕನ್ನಡತನ ಜಾಗತಿಕ ಮಟ್ಟದಲ್ಲಿ ಬೆಳಗುತ್ತಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.


Click it and Unblock the Notifications
