ಕರ್ನಾಟಕ 'ರಾಜ್ಯೋತ್ಸವ ಪ್ರಶಸ್ತಿ': ಮಹತ್ವದ ಬದಲಾವಣೆ..
ಬೆಂಗಳೂರು, ಮಾರ್ಚ್ 25: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಕೆ ಕ್ರಮದಿಂದ ಅದೆಷ್ಟೋ ಸಾಧಕರು ತೆರೆಮರೆಯಲ್ಲಿ ಉಳಿಯುವಂತಾಗಿದೆ. ಕೆಲವರು ಅರ್ಜಿ ಹಾಕಲು ಮನಸ್ಸು ಮಾಡುವುದಿಲ್ಲ. ಕಾರಣ ಪ್ರಶಸ್ತಿಗಳು ನಮ್ಮ ಕೆಲಸ, ಸಾಧನೆ, ಅರಸಿ ಬರಬೇಕೇ ಹೊರತು, ಅರ್ಜಿ ಹಾಕಿದರೆ ನಾವಾಗೇ ಹೋದಂತಾಗುತ್ತದೆ ಎಂಬ ಮಾತುಗಳು ಹಿರಿಯ ಪತ್ರಕರ್ತರಿಂದ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಅರ್ಜಿ ಕರಿಯದೇ ರಾಜ್ಯೋತ್ಸವ ಪ್ರಶಸ್ತಿ ನೀಡುವ ಚಿಂತನೆ ಮಾಡಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆಗೆ ಮುಂದಿನ ದಿನಗಳಲ್ಲಿ ವಿವಿಧ ವಲಯಗಳ ಸಾಧಕರಿಂದ ಅರ್ಜಿಯನ್ನು ಸ್ವೀಕರಿಸದೆ, ಸಾಧನೆಯನ್ನು ಗುರುತಿಸಿ ಅರ್ಹರಿಗೆ ಪ್ರಶಸ್ತಿ ನೀಡಬೇಕಿದೆ. ಅರ್ಜಿ ಕರೆಯದೇ ಪ್ರಶಸ್ತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.

ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಜರುಗಿದ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ವಿತರಣೆ ಮಾಡಿದರು. ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಕುರಿತು ಮಾತನಾಡಿದರು.
ಪ್ರಶಸ್ತಿಗಳನ್ನು ಕೇಳಿ ಪಡೆಯುವಂತೆ ಆಗಬಾರದು. ವಿವಿಧ ರಂಗದ ಸಾಧಕರನ್ನು, ಅರ್ಹರನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತಾಗಬೇಕು. ಹೀಗೆ ಮಾಡಿದಲ್ಲಿ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ. ಆದ್ದರಿಂದ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಕರೆಯದೇ ಪ್ರದಾನ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಸಮಾಲೋಚನೆ ನಡೆಸಿ ಪ್ರಕಟಿಸಲಾಗುವುದು ಎಂದರು.

ಹಿಂದಿನಿಂದಲೇ ರಾಜ್ಯೋತ್ಸವ ಪ್ರಶಸ್ತಿ ವಿತರಣೆಗೆ ಪ್ರತಿ ವರ್ಷ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿತ್ತು. ನಾನು ಜಿಲ್ಲಾ ಪ್ರವಾಸಕ್ಕೆ ತೆರಳಿದರೆ, ಅರ್ಜಿ ಹಾಗೂ ದಾಖಲೆಗಳನ್ನು ಇಟ್ಟುಕೊಳ್ಳಲು ಜೊತೆಯಲ್ಲಿ ಹೆಚ್ಚುವರಿ ಕಾರನ್ನು ತೆಗೆದುಕೊಂಡು ಹೋಗುವ ಸ್ಥಿತಿ ಇದೆ. ಕಳೆದ ಬಾರಿ ಅರ್ಜಿ ಹಾಕದ ಅಂದಾಜು 25ಕ್ಕೂ ಹೆಚ್ಚು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಉದಾಹರಣೆಗೆ ಕೊಪ್ಪಳ ಜಿಲ್ಲೆಯ ವೃದ್ಧೆ ಹುಚ್ಚವ್ವ ಎಂಬುವರು ತಮ್ಮ ಕೋಟ್ಯಂತರ ಆಸ್ತಿ (ಎರಡು ಎಕರೆ ಜಾಗ) ಶಾಲೆಗೆ ನೀಡಿದ್ದರು. ಅವರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದರ ಬಗ್ಗೆ ತೃಪ್ತಿ ಇದೆ ಎಂದು ಹೇಳಿದರು.
ಸಾಹಿತ್ಯಗಳು ಅಗತ್ಯ ಸಲಹೆ ನೀಡಲಿ
ಸದರಿ ವರ್ಷದಿಂದ ಅರ್ಜಿ ಸ್ವೀಕರಿಸದೆ ಪ್ರಶಸ್ತಿ ನೀಡುವ ವಿಚಾರ ಕುರಿತು ರಾಜ್ಯದ ಸಾಹಿತಿಗಳು ಸಮ್ಮತಿಸಿದ್ದಾರೆ. ಈ ಕುರಿತು ಮತ್ತಷ್ಟು ಸಲಹೆಗಳ ನಿರೀಕ್ಷೆಯಲ್ಲಿದ್ದೇವೆ. ಇಂತಹ ವಿಚಾರಗಳು ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಪ್ರಶಸ್ತಿ ಪ್ರದಾನದಲ್ಲಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಮಾಜಿಕ ನ್ಯಾಯ ಪಾಲಿಸುತ್ತದೆ. ಅದನ್ನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರವು ಮೂರು ವರ್ಷಗಳ ಕಾಲ ಯಾವುದೇ ಪ್ರಶಸ್ತಿ ನೀಡಿರಲಿಲ್ಲ. ಮೌನ ವಹಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸುಮಾರು 25 ವಿಭಾಗದಲ್ಲಿ 75 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಪರಿಣಾಮ ಬೆಂಗಳೂರಿಗೆ ಮಾತ್ರ ಸಿಮೀತವಾಗಿದ್ದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯುತ್ತಿವೆ ಎಂದು ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವಿವರಿಸಿದರು.
ವರ್ಷದ ಪ್ರಶಸ್ತಿ ಪುರಸ್ಕೃತರ ವಿವರ
ಕಾರ್ಯಕ್ರಮದಲ್ಲಿ 2023ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಯನ್ನು ''ಡಾ.ಸಿ.ವೀರಣ್ಣ, ಡಾ.ಶ್ರೀರಾಮ ಇಟ್ಟಣ್ಣನವರ, ಜಾಣಗೆರೆ ವೆಂಕಟರಾಮಯ್ಯ, ಎ.ಎಂ.ಮದರಿ ಹಾಗೂ ಡಾ.ಸಬಿಹಾ ಭೂಮಿಗೌಡ'' ಅವರಿಗೆ ನೀಡಿ ಗೌರವಿಸಲಾಯಿತು.
2023ನೇ ಸಾಲಿನ ವರ್ಷದ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು '' ಡಾ.ಎಂ.ಎಸ್.ಶೇಖರ್, ಜಿ.ಎನ್.ಮೋಹನ್ , ಡಾ.ಟಿ.ಎಸ್.ವಿವೇಕಾನಂದ, ಡಾ.ಜಯಶ್ರೀ ಕಂಬಾರ, ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಡಾ.ಬಾಲಗುರುಮೂರ್ತಿ, ಪ್ರೊ.ಶಿವಗಂಗಾ ರುಮ್ಮಾ, ಡಾ.ರೀಟಾ ರೀನಿ, ಡಾ.ಕಲೀಂ ಉಲ್ಲಾ, ಡಾ.ವೆಂಕಟಕಗಿರಿ ದಳವಾಯಿ ಅವರಿಗೆ ಪ್ರದಾನ ಮಾಡಲಾಯಿತು.












Click it and Unblock the Notifications