ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದ ಸುಪ್ರೀಂಕೋರ್ಟ್
ಬೆಂಗಳೂರು, ಸೆ. 12 : ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂಬ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದರಿಂದ 1ರಿಂದ 4ನೇ ತರಗತಿವರೆಗಿನ ಶಿಕ್ಷಣ ಕನ್ನಡದಲ್ಲಿ ಆಗಬೇಕು ಎಂದು ಆದೇಶಿಸಿದ್ದ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ.
ಕರ್ನಾಟಕ ಸರ್ಕಾರದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್.ಲೋಧಾ ಅವರ ಪೀಠ, ಅರ್ಜಿಯನ್ನ ವಜಾಗೊಳಿಸಿದೆ. ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿಯೇ ಕಲಿಯಬೇಕೆಂದಿಲ್ಲ. ಮಕ್ಕಳ ಮತ್ತು ಪೋಷಕರ ಇಚ್ಛೆಯಂತೆ ಯಾವ ಮಾಧ್ಯಮವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. [ಮಾಧ್ಯಮ ತೀರ್ಪಿನ ವಿರುದ್ಧ ಮೇಲ್ಮನವಿ]

ಮೇ.6ರಂದು ಭಾಷಾ ಮಾಧ್ಯಮ ವಿವಾದ ಕುರಿತು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಹೇಳಿತ್ತು. ಇದರಿಂದ ಒಂದರಿಂದ ನಾಲ್ಕನೇ ತರಗತಿವರೆಗೆ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂದು 1994ರಲ್ಲಿ ಭಾಷಾ ಮಾಧ್ಯಮ ಆದೇಶವನ್ನು ಹೊರಡಿಸಿದ್ದ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾಗಿತ್ತು.[ಸುಪ್ರೀಂಕೋರ್ಟ್ ತೀರ್ಪು ಏನಿತ್ತು]
ಸುಪ್ರೀಂಕೋರ್ಟ್ ತೀರ್ಪು ಪ್ರಕಟಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ತಜ್ಞರು, ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳು ಮುಂತಾದವರೊಂದಿಗೆ ಚರ್ಚಿಸಿ, ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ನಿರ್ಧಾರ ಕೈಗೊಂಡಿದ್ದರು. ಅದರಂತೆ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. [ಏನಿದು ಭಾಷಾ ಮಾಧ್ಯಮ ವಿವಾದ?]
ಒಂದರಿಂದ ನಾಲ್ಕನೇ ತರಗತಿವರೆಗೆ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂದು 1994ರಲ್ಲಿ ಭಾಷಾ ಮಾಧ್ಯಮ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿತ್ತು. ಖಾಸಗಿ ಶಾಲೆಗಳು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದವು, ಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿ ತೀರ್ಪುನೀಡಿತ್ತು. ಕರ್ನಾಟಕ ಸರ್ಕಾರ ಇದನ್ನು ಪ್ರಶ್ನಿಸಿ ಸುಪ್ರೀಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಅಲ್ಲೂ ಎರಡು ಬಾರಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಲಾಗಿದೆ.
ಖಾಸಗಿ ಶಾಲೆಗಳಿಗೆ ಸಂತಸ : ಕರ್ನಾಟಕ ಸರ್ಕಾರದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ಖಾಸಗಿ ಶಾಲೆಗಳು ಸಂತಸಗೊಂಡಿವೆ. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ಅವುಗಳಿಗೆ ಅವಕಾಶ ಸಿಕ್ಕಂತಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡಬೇಕು ಎಂಬ ಸರ್ಕಾರದ ಆದೇಶದಿಂದ ಅವುಗಳಿಗೆ ಬಿಡುಗಡೆ ಸಿಕ್ಕಿದೆ.












Click it and Unblock the Notifications