ಶಿಕ್ಷಣ ಇಲಾಖೆ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳು ಫೇಲ್!

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಹಾಗೂ ಮೂಲ ಸೌಕರ್ಯಗಳು ಸೇರಿದಂತೆ ಐದು ಅಂಶಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೌಲ್ಯಮಾಪನ ನಡೆಸಿತ್ತು, ರಾಜ್ಯದ 1020 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನಡೆದ ಈ ಮೌಲ್ಯಮಾಪನದಲ್ಲಿ ಯಾವುದೇ ಶಾಲೆ ಎ+ ಶ್ರೇಣಿ ಪಡೆದಿಲ್ಲ. ಎ ಶ್ರೇಣಿ ಪಡೆದ ಸರ್ಕಾರಿ ಶಾಲೆಗಳೂ ಕೇವಲ 5.
ಪ್ರತಿ ತಾಲ್ಲೂಕಿನಿಂದ ತಲಾ 3 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2 ಪ್ರೌಢ ಶಾಲೆಗಳನ್ನು ಮೌಲ್ಯಮಾಪನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಟ್ಟು 1020 ಶಾಲೆಗಳ ಗುಣಮಟ್ಟದ ಮೌಲ್ಯಮಾಪನ ಮಾಡಿ 2012-13ನೇ ಸಾಲಿನ ಪೈಲಟ್ ಅಧ್ಯಯನ ವರದಿ ನೀಡಿರುವ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯೂಎಎಸಿ) ಈ ಸಂಗತಿ ಬಹಿರಂಗ ಪಡಿಸಿದೆ.
ಮೌಲ್ಯಮಾಪನ ವರದಿ : ರಾಜ್ಯದಲ್ಲಿ ಮೌಲ್ಯಮಾಪನ ನಡೆದ 1020 ಶಾಲೆಗಳಲ್ಲಿ ಚಿಕ್ಕೋಡಿ ತಾಲ್ಲೂಕಿನ 4 ಮತ್ತು ಉಡುಪಿಯ 1 ಶಾಲೆ ಮಾತ್ರ ಎ ಶ್ರೇಣಿ ಪಡೆದಿವೆ. ಚಿಕ್ಕೋಡಿ, ಉಡುಪಿ, ಕೊಪ್ಪಳ, ಚಿಕ್ಕಮಗಳೂರು, ಬಾಗಲಕೋಟೆ ಮತ್ತು ಧಾರವಾಡ ವ್ಯಾಪ್ತಿಯ ಒಟ್ಟು 22 ಶಾಲೆಗಳು ಬಿ+ ಶ್ರೇಣಿ ಪಡೆದಿವೆ. ಉಳಿದಂತೆ ಇತರೆ ತಾಲ್ಲೂಕುಗಳ 122 ಶಾಲೆಗಳು ಬಿ ಶ್ರೇಣಿ, 277 ಶಾಲೆಗಳು ಸಿ+, 384 ಶಾಲೆಗಳು ಸಿ ಶ್ರೇಣಿ ಗಳಿಸಿವೆ.
ವರದಿ ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಬೀದರ್, ದಾವಣಗೆರೆ, ಗುಲ್ಬರ್ಗಾ, ಬಳ್ಳಾರಿ, ರಾಯಚೂರು, ಬಿಜಾಪುರ ಹಾಗೂ ಕೋಲಾರ ವ್ಯಾಪ್ತಿಯ 200 ಶಾಲೆಗಳು ಡಿ ಶ್ರೇಣಿಯಲ್ಲಿ ಉಳಿದಿವೆ ಎಂದು ಗುರುವಾರ ಮಾಹಿತಿ ನೀಡಿದರು. ಸರ್ಕಾರಿ ಶಾಲೆಗಳ ಕುರಿತು ಕೆಎಸ್‌ಕ್ಯೂಎಎಸಿ ನೀಡಿರುವ ವರದಿ ಹಿನ್ನಲೆಯಲ್ಲಿ ಶಾಲೆಗಳ ಗುಣಮಟ್ಟ ಸುಧಾರಿಸಲು ಆಂತರಿಕ ಗುಣಮಟ್ಟ ಅಭಿವೃದ್ಧಿ ಕೋಶ (ಐಕ್ಯುಐಸಿ)' ರಚಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು.
ಶಾಲೆಗಳ ಮೌಲ್ಯಮಾಪನಕ್ಕಾಗಿ ಭೌತಿಕ ಪರಿಸರ ಹಾಗೂ ಸೌಲಭ್ಯಗಳು, ಕಲಿಕಾ ಪರಿಸರ, ನಾಯಕತ್ವ, ಸಮುದಾಯದ ಪಾಲ್ಗೊಳ್ಳುವಿಕೆ, ನಾವೀನ್ಯಯುತ ಚಟುವಟಿಕೆಗಳು ಎಂಬ ಐದು ಕ್ಷೇತ್ರಗಳನ್ನು ಪರಿಗಣಿಸಲಾಗಿತ್ತು. ಮೊದಲು ಶಾಲೆಗಳಿಂದ ಆಂತರಿಕ ವರದಿ ತರಿಸಿಕೊಂಡು ನಂತರ, ಕೆಎಸ್‌ಕ್ಯೂಎಎಸಿಯು ಆಯ್ಕೆ ಮಾಡಿಕೊಂಡಿದ್ದ 612 ಬಾಹ್ಯ ಮೌಲ್ಯಮಾಪಕರನ್ನು ಶಾಲೆಗಳಿಗೆ ಕಳುಹಿಸಿ, ಮೌಲ್ಯಮಾಪನ ನಡೆಸಲಾಗಿತ್ತು.












Click it and Unblock the Notifications