ರಾಘವೇಶ್ವರ ಶ್ರೀ ವಿರುದ್ಧ ನಿಷ್ಪಕ್ಷ ತನಿಖೆಗೆ ಸಾಹಿತಿಗಳ ಒತ್ತಾಯ
ಬೆಂಗಳೂರು, ಸೆಪ್ಟೆಂಬರ್. 15: ಶಿವಮೊಗ್ಗ ಜಿಲ್ಲೆ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅತ್ಯಾಚಾರ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಪ್ರಗತಿಪರ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ ಸಾಹಿತಿಗಳು ತನಿಖೆಯನ್ನು ಕ್ಷಿಪ್ರವಾಗಿ ನಡೆಸಲು ಒತ್ತಾಯ ಮಾಡಿದ್ದಾರೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ ಸೇರಿದಂತೆ ಅನೇಕ ಸಾಹಿತಿಗಳ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.[ಗಿರಿನಗರದಲ್ಲಿ ಸಿಐಡಿಯಿಂದ ರಾಘವೇಶ್ವರ ಶ್ರೀ ವಿಚಾರಣೆ]

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸ್ವಾಮೀಜಿ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಎರಡು ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆಯಲ್ಲಿ ಯಾವ ಲೋಪವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಘವೇಶ್ವರ ಸ್ವಾಮೀಜಿ ಮೇಲೆ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಕಳೆದ ವರ್ಷ ಅತ್ಯಾಚಾರದ ದೂರು ದಾಖಲಿಸಿದ್ದರೆ, ಯಕ್ಷಗಾನ ಕಲಾವಿದೆಯೊಬ್ಬರು ಗಿರಿನಗರ ಠಾಣೆಯಲ್ಲಿ ಆಗಸ್ಟ್ 29 ರಂದು ಅತ್ಯಾಚಾರದ ದೂರು ದಾಖಲಿಸಿದ್ದರು. ಸ್ವಾಮೀಜಿಯನ್ನು ಬಂಧಿಸುವಂತೆ ಮಹಿಳಾ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದವು.
ನಂತರ ಸಿಐಡಿ ಅಧಿಕಾರಿಗಳು ಸ್ವಾಮೀಜಿಯನ್ನು ಸೆಪ್ಟೆಂಬರ್ 11 ರಂದು ಸುಮಾರು ಎರಡು ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದರು. ಇದೀಗ ಸಾಹಿತಿಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ ಮಾಡಿದ್ದು ಸಿಐಡಿ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications