ನವರಂಗ್ ಥಿಯೇಟರ್ ಮಾಲೀಕ ಕೆಸಿಎನ್ ಮೋಹನ್ ಇನ್ನಿಲ್ಲ
ಬೆಂಗಳೂರು, ಜುಲೈ 02: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲೀಕ ಕೆಸಿಎನ್ ಮೋಹನ್ ವಿಧಿವಶರಾದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಭಾನುವಾರ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಸಿಎನ್ ಮೋಹನ್ ನಿಧನ ಹೊಂದಿದರು. ಕಿಡ್ನಿ ವೈಫಲ್ಯದ ಕಾರಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಚಿತ್ರ ನಿರ್ಮಾಪಕರಾಗಿ, ಸಿನಿಮಾ ವಿತರಕರಾದ ಕೆಸಿಎನ್ ಮೋಹನ್ ಬೆಂಗಳೂರಿನ ನವರಂಗ್ ಥಿಯೇಟರ್ ಮಾಲೀಕರಾಗಿದ್ದರು. ಜಯಸಿಂಹ, ಭಲೇ ಚತುರ ಸೇರಿದಂತೆ ಅನೇಕ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.
ಅನುಪಮ್ ಮೂವೀಸ್ ಮೂಲಕ ಕೆಸಿಎನ್ ಕುಟುಂಬ ಕನ್ನಡ ಚಿತ್ರರಂಗಕ್ಕೆ ಹಲವು ಚಿತ್ರಗಳನ್ನು ಕೊಡುಗೆಯಾಗಿ ನೀಡಿದೆ. ತಂದೆ ಕೆಸಿಎನ್ ಗೌಡ್ರು ನಿಧನದ ಬಳಿಕ ಕೆಸಿಎನ್ ಮೋಹನ್ ಅನುಪಮ್ ಮೂವೀಸ್ ನೋಡಿಕೊಳ್ಳುತ್ತಿದ್ದರು.
62 ವರ್ಷದ ಕೆಸಿಎನ್ ಮೋಹನ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 2 ಭಾನುವಾರ ಅವರು ವಿಧಿವಶರಾಗಿದ್ದಾರೆ.
ಕೆಸಿಎನ್ ಮೋಹನ್ ಪತ್ನಿ, ಕೆಸಿಎನ್ ಮೋಹನ್ ಸಹೋದರ ಸಹ ಕೆಲವು ವರ್ಷಗಳ ಹಿಂದೆ ವಿಧಿವಶರಾಗಿದ್ದಾರೆ. ಮೋಹನ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಸ್ತೂರಿ ನಿವಾಸ ನಿರ್ಮಾಣ; ಕೆಸಿಎನ್ ಕುಟುಂಬ ಕನ್ನಡ ಚಿತ್ರರಂಗಕ್ಕೆ ಅನೇಕ ಕೊಡುಗೆಯನ್ನು ನೀಡಿದೆ. ಕಸ್ತೂರಿ ನಿವಾಸ, ರಂಗ ನಾಯಕಿ, ಭಕ್ತ ಸಿರಿಯಾಳ, ಸತ್ಯ ಹರಿಶ್ಚಂದ್ರ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಕನ್ನಡ ಚಿತ್ರರಂಗದ ಶ್ರೀಮಂತ ಚಿತ್ರ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆ ಸಹ ಕೆಸಿಎನ್ ಕುಟುಂಬ ಪಡೆದಿತ್ತು.
ಹಿಂದೆ ಬ್ಲಾಕ್ ಎಂಡ್ ವೈಟ್‌ನಲ್ಲಿ ನಿರ್ಮಾಣಗೊಂಡಿದ್ದ ಡಾ. ರಾಜ್‌ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನಿಮಾವನ್ನು ಕೆಲ ವರ್ಷಗಳ ಹಿಂದೆ ಕಲರ್ ಮಾಡಿಸಿ, ಮರು ಬಿಡುಗಡೆ ಮಾಡಿದ ಕೀರ್ತಿಯೂ ಕೆಸಿಎನ್ ಮೋಹನ್ ಅವರದ್ದಾಗಿದೆ.
ತಮಗೆ ತಿಂಗಳು ಬರುವ ಅಂಗಡಿಗಳ ಬಾಡಿಗೆ ಬಗ್ಗೆ, ತಂದೆ ಮಾಡಿಟ್ಟಿರುವ ಆಸ್ತಿಯ ಬಗ್ಗೆ ಕೆಸಿಎನ್ ಮೋಹನ್ ಮಾತನಾಡಿರುವ ವಿಡಿಯೋ ತುಣುಕೊಂದು ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಸಹ ಅವರು ನವರಂಗ್ ಥಿಯೇಟರ್ ಬಗ್ಗೆ ಮಾತನಾಡಿದ್ದರು.












Click it and Unblock the Notifications