KPSC: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ದೋಷ, ಮತ್ತೆ ಪರೀಕ್ಷೆ ನಡೆಯಲಿದೆಯೇ

ಬೆಂಗಳೂರು, ಜನವರಿ 12: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಗಳು ಪದೇ ಪದೇ ಚರ್ಚೆಗೆ ಕಾರಣವಾಗುತ್ತಿವೆ. ಡಿಸೆಂಬರ್ 29ರಂದು ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಮರು ಪರೀಕ್ಷೆಗಳನ್ನು ಕೆಪಿಎಸ್‌ಸಿ ನಡೆಸಿತ್ತು. 2024ರ ಆಗಸ್ಟ್​ 27ರಂದು ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಕಾರಣಕ್ಕೆ ಮರು ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ದೋಷಗಳಿವೆ ಎಂಬುದು ಈಗ ಚರ್ಚೆಯ ವಿಚಾರ.

ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ ಮರು ಪರೀಕ್ಷೆಗಳ ಕುರಿತು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. ಕನ್ನಡ ಪತ್ರಿಕೆಯಲ್ಲಿನ ತಪ್ಪುಗಳ ಕುರಿತು ಗಮನ ಸೆಳೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ‌ ನಡೆಸಲು ಮನವಿ ಮಾಡಿದ್ದಾರೆ.

Kannada Error In KPSC Gazetted Probationers Preliminary Re Exam Letter To Chief Minister

ಗೊ. ರು. ಚನ್ನಬಸಪ್ಪ ಪತ್ರ: ಸಾಹಿತಿ ಗೊ. ರು. ಚನ್ನಬಸಪ್ಪ ಬರೆದಿರುವ ಪತ್ರ ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎಂಬ ವಿಷಯವನ್ನು ಒಳಗೊಂಡಿದೆ.

ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚೆಗೆ ನಡೆಸಿದ ಸ್ಪರ್ಧಾತ್ಮಕ ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಆಗಿರುವ ಪ್ರಮಾದಗಳನ್ನು ಕುರಿತು ಮಾಧ್ಯಮಗಳಲ್ಲಿ ಬಹಿರಂಗಗೊಂಡಿರುವ ವರದಿಗಳು ಆಘಾತಕಾರಿಯಾಗಿವೆ. ಈ ಸಂಬಂಧ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘವು ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳ ಪರವಾಗಿ ನಡೆಸಿರುವ ಪ್ರತಿಭಟನೆ ಮತ್ತು ಹೋರಾಟಗಳು ತಮ್ಮ ಗಮನಕ್ಕೆ ಬಂದಿವೆ ಎಂದು ತಿಳಿದಿದ್ದೇನೆ.

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 27.08.2024ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿದ್ದ ಅನೇಕ ಲೋಪದೋಷಗಳ ಬಗೆಗೆ ವ್ಯಕ್ತವಾದ ವಿರೋಧ ಮತ್ತು ಪರೀಕ್ಷಾರ್ಥಿಗಳ ಒತ್ತಾಯಕ್ಕೆ ಮಣಿದು ಆಯೋಗವು ದಿನಾಂಕ 29.12.2024 ರಂದು ನಡೆಸಿದ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲೂ ಅದೇ ಲೋಪ-ದೋಷಗಳು ಮರುಕಳಿಸಿರುವುದು ನಿಜಕ್ಕೂ ದಿಗ್ಭ್ರಮೆಯುಂಟುಮಾಡುತ್ತದೆ.

ಆಯೋಗದಂತಹ ಹೊಣೆಗಾರ ವ್ಯವಸ್ಥೆಯೇ ಇಂತಹ ತಪ್ಪುಗಳನ್ನು ಎಸಗುತ್ತಿರುವುದು ಸರ್ಕಾರಕ್ಕೆ ಕಳಂಕ ತರುವ ಸಂಗತಿ. ಪ್ರಸ್ತಾಪಿತ ಪ್ರಶ್ನೆಪತ್ರಿಕೆಗಳನ್ನು ಮೂಲ ಕನ್ನಡದಲ್ಲೇ ಸಿದ್ಧಪಡಿಸುವಂತಾದರೆ ಇಂತಹ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ಈ ಗೊಂದಲದಿಂದ ಕನ್ನಡ ಮಾಧ್ಯಮದ ಅದರಲ್ಲೂ ಗ್ರಾಮಾಂತರದ ಅಭ್ಯರ್ಥಿಗಳಿಗೆ ಆಗುವ ಅನ್ಯಾಯ ಅಷ್ಟಿಷ್ಟಲ್ಲ.

ಆಯೋಗದ ಈ ತಪ್ಪಿನ ವಿರುದ್ಧ ಯುವಸಮುದಾಯ ಉದ್ವೇಗಕ್ಕೆ ಒಳಗಾಗುವುದು ಸಹಜ. ಈ ಸಹಜ ಉದ್ವೇಗದೊಡನೆ ಆಯೋಗವು ಚೆಲ್ಲಾಟ ನಡೆಸುವುದು ಅಕ್ಷಮ್ಯ. ಆದುದರಿಂದ ತಾವು ತಕ್ಷಣವೇ ಗಮನ ಹರಿಸಿ, ಈ ಅವ್ಯವಸ್ಥೆಗೆ ಕಾರಣವಾದವರ ಮೇಲೆ ಸೂಕ್ತ ಶಿಸ್ತಿನ ಕ್ರಮಕೈಗೊಳ್ಳುವುದರ ಜೊತೆಗೆ ದಿನಾಂಕ 29.12.2024 ರಂದು ನಡೆದ ಮರುಪರೀಕ್ಷೆಯ ಸಿಂಧುತ್ವವನ್ನು ರದ್ದುಗೊಳಿಸಿ, ದೋಷರಹಿತ ಪ್ರಶ್ನೆ ಪತ್ರಿಕೆಗಳಿಂದ ಮತ್ತೆ ಪರೀಕ್ಷೆ ನಡೆಸಲು ಆಯೋಗಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕಾಗಿ ಕೋರುತ್ತೇನೆ.

ಇದು ಸಹಸ್ರಾರು ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಈ ಸಮಸ್ಯೆಯು ಉಲ್ಬಣವಾಗದಂತೆ ಈ ಸಂಬಂಧ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯು ನಡೆಸಿರುವ ಹೋರಾಟದ ನ್ಯಾಯಯುತ ಬೇಡಿಕೆಯನ್ನು ತಾವು ಈಡೇರಿಸುವಿರೆಂಬ ವಿಶ್ವಾಸ ಹೊಂದಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೆಪಿಎಸ್‌ಸಿ ಪರೀಕ್ಷೆಯಲ್ಲಿನ ಕನ್ನಡ ತಪ್ಪುಗಳ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಪತ್ರವನ್ನು ಬರೆದಿದ್ದಾರೆ. ಕನ್ನಡ ಮಾಧ್ಯಮದ ಪ್ರಶ್ನೆ ಪತ್ರಿಕೆಗಳಲ್ಲಿನ ಎಡವಟ್ಟುಗಳನ್ನು ಮುಂದುವರೆಸಿರುವ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ವಿರೋಧಿ ನಡೆ ಖಂಡನೀಯ ಎಂದು ಹೇಳಿದ್ದಾರೆ.

ಕೆಪಿಎಸ್‌ಸಿ ಆಗಸ್ಟ್ 2024ರಲ್ಲಿ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಪರೀಕ್ಷೆಗಳನ್ನು ನಡೆಸಿತ್ತು. ಆಗ ಕನ್ನಡ ಭಾಷಾ ಪತ್ರಿಕೆಯಲ್ಲಿನ ತಪ್ಪುಗಳು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದ ಪರೀಕ್ಷೆಗಳನ್ನು ರದ್ದುಗೊಳಿಸಿ ಡಿಸೆಂಬರ್ 29ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಆದರೆ ಈಗ ಪುನಃ ಕನ್ನಡ ತಪ್ಪುಗಳು ಇವೆ ಎಂಬುದು ಚರ್ಚೆಯ ವಿಷಯವಾಗಿದೆ.

ಈ ಹಿಂದೆ ಪರೀಕ್ಷೆಗಳ ತಪ್ಪುಗಳು ಬೆಳಕಿಗೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೆ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.

ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ನಾವು ನೇಮಕಾತಿ ಪ್ರಕ್ರಿಯೆಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+