ಕಾಗಿನೆಲೆಯಲ್ಲಿ ಪ್ರತಿ ವರ್ಷ ಕನಕ ಉತ್ಸವ: ಸಿ.ಎಂ ಸಿದ್ದರಾಮಯ್ಯ
Kanaka Utsava: ಕಾಗಿನೆಲೆಯಲ್ಲಿ ಕನಕ ಉತ್ಸವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಾಗಿನೆಲೆಯಲ್ಲಿ ಪ್ರತಿ ವರ್ಷ ಕನಕ ಉತ್ಸವವನ್ನು ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಉತ್ಸವ ಸಂದರ್ಭದಲ್ಲಿ ಜಿಲ್ಲೆಯ ದಾರ್ಶನಿಕರ ಜೀವನಾದರ್ಶಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಕ ಅಧ್ಯಯನ ಪೀಠ ಸಮನ್ವಯದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು.
ಪ್ರಾಧಿಕಾರದಲ್ಲಿ ಸಂಚಿತ ನಿಧಿಯನ್ನು ಸ್ಥಾಪಿಸಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಪ್ರಾಧಿಕಾರದ ಆದಾಯ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕನಕದಾಸರ ಕರ್ಮಭೂಮಿ ಕಾಗಿನೆಲೆ ಮತ್ತು ಜನ್ಮಭೂಮಿ ಸ್ಥಳವಾದ ಬಾಡ ಗ್ರಾಮ ಹಾಗೂ ಸುತ್ತಮುತ್ತಲಿನ ಪರಂಪರೆಯ ತಾಣಗಳನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ವಿವಿಧ ಯೋಜನೆಗಳ ಕ್ರಿಯಾ ಯೋಜನೆ ಅನುಮೋದನೆಗೆ ಸಲ್ಲಿಸಲಾಯಿತು. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಲಾಭವನ ನಿರ್ಮಾಣ, ಕನಕ ವಸ್ತು ಸಂಗ್ರಹಾಲಯದಲ್ಲಿ ಒಳವಸ್ತು ಶಿಲ್ಪ ಸಂಗ್ರಹಾಲಯ ನಿರ್ಮಾಣ, ಚೆನ್ನಕೇಶವ ದೇವಾಲಯ, ಮೆಟ್ಟಿಲು, ಗೋಪುರ, ಕಮಾನುಗಳ ನಿರ್ಮಾಣ, ಕದರಮಂಡಲಗಿ ವೆಂಕಟೇಶ್ವರ ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು.
ಪ್ರಾಧಿಕಾರದ ವ್ಯಾಪ್ತಿಯ ಉದ್ಯಾನಗಳ ವಾರ್ಷಿಕ ನಿರ್ವಹಣೆ ಗುತ್ತಿಗೆ ನೀಡುವ ಕುರಿತು ಹಾಗೂ ಕನಕ ಪರಿಸರ ಉದ್ಯಾನದಲ್ಲಿ ಖಾಲಿ ಇರುವ ಜಾಗದಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಲು ನಿರ್ಧರಿಸಲಾಯಿತು. ಕಾಗಿನೆಲೆ ಗ್ರಾಮದ ವ್ಯಾಪ್ತಿಯಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳ ಜಾರಿಗೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಆರ್‌ಎಸ್‌ಎಸ್ ನಿರ್ಬಂಧ ಮೇಲ್ಮನವಿ: ಇನ್ನು ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿತ್ತು. ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ ಹಾಗೂ ಮುಖಭಂಗವಾಗಿದ್ದು, ಇದೀಗ ಈ ವಿಚಾರವಾಗಿ ಮೇಲ್ಮನವಿ ಸಲ್ಲಿಸುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.












Click it and Unblock the Notifications