ನಾನು ಕ್ಷಮೆ ಕೇಳಲ್ಲ, ಇದು ನನ್ನ ಲೈಫ್‌ಸ್ಟೈಲ್: ನಟ ಕಮಲ್ ಹಾಸನ್ ಮತ್ತೆ ಸಮರ್ಥನೆ
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ಹೇಳಿಕೆಯೂ ಭಾರಿ ವಿರೋಧ ಹಾಗೂ ವಿವಾದಕ್ಕೆ ಕಾರಣವಾಗಿದೆ. ಕಮಲ್ ಹೇಳಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ, ರಾಜಕಾರಣಿಗಳು, ಕನ್ನಡಪರ ಸಂಘಟನೆಗಳು, ಕರ್ನಾಟಕ ಫಿಲ್ಮ್ ಚೇಂಬರ್ ಸೇರಿದಂತೆ ಕನ್ನಡಿಗರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಕಮಲ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ರೆ ಅವರ ಥಗ್ ಲೈಫ್ ಸಿನಿಮಾ ರಿಲೀಸ್ ಆಗಲು ಬಿಡಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಮೊನ್ನೆಯಷ್ಟೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಕಮಲ್ ಹಾಸನ್ ಅವರು ತಾವು ಕ್ಷಮೆ ಕೇಳಲ್ಲ ಎಂದು ಹೇಳಿದ್ದರು. ಇಂದು ಮತ್ತೆ ಕನ್ನಡದ ವಿವಾದದ ಬಗ್ಗೆ ಕಮಲ್ ಪ್ರತಿಕ್ರಿಯಿಸಿದ್ದಾರೆ.
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲೇ ಕನ್ನಡದ ಬಗ್ಗೆ ಈ ಹೇಳಿಕೆ ನೀಡಿರುವುದರಿಂದ ಕ್ಷಮೆ ಕೇಳುವವರೆಗೆ ಕರ್ನಾಟಕದಲ್ಲಿ ಆ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡಿಗರು ಬಲವಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಕಮಲ್ ಇಂದು ಪ್ರತಿಕ್ರಿಯಿಸಿದ್ದಾರೆ. ʼಇದು ಪ್ರಜಾಪ್ರಭುತ್ವ, ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿರುವ ನನ್ನ ಪ್ರೀತಿ ನಿಜ ಎಂದಿದ್ದಾರೆ ಕಮಲ್.

ಅಜೆಂಡಾ ಇರುವವರು ಹೊರತುಪಡಿಸಿ ಯಾರೂ ಇದನ್ನು ಅನುಮಾನಿಸುವುದಿಲ್ಲ. ನನಗೆ ಈ ಹಿಂದೆಯೂ ಹಲವು ಬೆದರಿಕೆಗಳನ್ನ ಹಾಕಲಾಗಿದೆ. ಒಂದು ವೇಳೆ ನನ್ನಿಂದ ತಪ್ಪಾಗಿದ್ದರೆ ಮಾತ್ರವೇ ನಾನು ಕ್ಷಮೆಯಾಚಿಸುತ್ತೇನೆ. ನಾನು ತಪ್ಪು ಮಾಡಿಲ್ಲ ಎಂದರೆ ಕ್ಷಮೆ ಕೇಳುವುದಿಲ್ಲ ಎಂದು ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನನ್ನ ಲೈಫ್‌ಸ್ಟೈಲ್, ನಾನು ಹಿಂದೆಯೂ ಹಲವು ಬೆದರಿಕೆಗಳನ್ನು ಎದುರಿಸಿದ್ದೇನೆ. ಆದರೆ ಕರ್ನಾಟಕದ ಮೇಲಿನ ನನ್ನ ಪ್ರೀತಿ ಯಾವಾಗಲೂ ಗೆಲ್ಲುತ್ತದೆ ಎಂದು ಕಮಲ್ ಹೇಳಿದ್ದಾರೆ.
ಕಮಲ್ ಹಾಸನ್ ಒಬ್ಬ ಕೊಂಗ: ವಾಟಾಳ್
ರಾಜ್ಯದಾದ್ಯಂತ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ನಡೆಯುತ್ತಿವೆ. ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಕಮಲ್ ಹಾಸನ್ ಅವರು ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಕಮಲ್ ಹೇಳಿಕೆ ಖಂಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕಮಲ್ ಹಾಸನ್ ಒಬ್ಬ ಕೊಂಗ, ದುರಹಂಕಾರಿ ಎಂದು ಕಿಡಿಕಾರಿದ್ದಾರೆ. ಅವನಿಗೂ ಭಾಷೆಗೂ ಸಂಬಂಧವಿಲ್ಲ ಎಂದಿದ್ದಾರೆ.
ಅದರಲ್ಲೂ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವನಿಗೆ ಯಾವುದೇ ಅಧಿಕಾರ ಇಲ್ಲ, ಅವನು ತಮಿಳುನಾಡಿನ ಬೆರಕೆ ನಟ. ಅತ್ಯಂತ ಹೀನಾಯಕಾರಿಯಾದಂತಹ ನಟ ಎಂದು ವಾಗ್ದಾಳಿ ನಡೆಸಿದ್ದಾರೆ. ಅವರು ಒಂದು ಪಕ್ಷ ಕಟ್ಟಿದರೂ ಅದರಲ್ಲಿ ಮುಂದುವರಿಯಲು ಆಗಲಿಲ್ಲ. ಈಗ ಡಿಎಂಕೆ ಜೊತೆ ಸೇರಿ ರಾಜ್ಯಸಭೆಗೆ ಬರಬೇಕು ಎಂದು ಪ್ರಯತ್ನಪಟ್ಟಿದ್ದಾರೆ. ತಮಿಳಿನಿಂದ ಕನ್ನಡ ಉದಯವಾಯ್ತು ಅನ್ನೋದು ನಿಜಕ್ಕೂ ಅಕ್ಷಮ್ಯ ಅಪರಾಧ ಎಂದು ಖಂಡಿಸಿದ್ದಾರೆ. ಕಮಲ್ ಹಾಸನ್ ಅವರ ಸಿನಿಮಾ ರಿಲೀಸ್ ಆದ್ರೆ, ಆ ಥಿಯೇಟರ್ ಧ್ವಂಸ ಮಾಡುವುದಾಗಿ ಕನ್ನಡಪರ ಹೋರಾಟಗಾರರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.












Click it and Unblock the Notifications