Kalyana Karnataka: ತೊಗರಿ, ಕೆಂಪು ಬಾಳೆ, ಕಬ್ಬು ಆಧಾರಿತ ಜೈವಿಕ ಆರ್ಥಿಕತೆಗೆ ಸಮಗ್ರ ಯೋಜನೆ: ಈ ಜಿಲ್ಲೆಗಳಿಗೆ ಗುಡ್‌ನ್ಯೂಸ್
Kalyana Karnataka: ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಾದ ತೊಗರಿ, ಕೆಂಪು ಬಾಳೆ ಮತ್ತು ಕಬ್ಬು ಆಧಾರಿತ ಪ್ರಾದೇಶಿಕ ಜೈವಿಕ ಆರ್ಥಿಕತೆಯನ್ನು ನಿರ್ಮಿಸುವ ಸಮಗ್ರ ಯೋಜನೆಯ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಬೆಂಗಳೂರು ಜೈವಿಕ-ಆರ್ಥಿಕ ಮಿಷನ್ ಕೇಂದ್ರವು (ಬಿಬಿಸಿ) ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಜೈವಿಕ-ಆರ್ಥಿಕ ಮಿಷನ್ ಹಾಗೂ ಕಲಬುರಗಿ ಪಲ್ಸ್ ಮಿಷನ್ ಮಾರ್ಗಸೂಚಿಯನ್ನು ಮಂಡಿಸಿತು. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಾದ ತೊಗರಿ, ಕೆಂಪು ಬಾಳೆ ಮತ್ತು ಕಬ್ಬು ಆಧಾರಿತ ಪ್ರಾದೇಶಿಕ ಜೈವಿಕ ಆರ್ಥಿಕತೆಯನ್ನು ನಿರ್ಮಿಸುವ ಸಮಗ್ರ ಯೋಜನೆಯನ್ನು ಪ್ರಸ್ತುತಪಡಿಸಿತು ಎಂದಿದ್ದಾರೆ.
ಕಲಬುರಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯ ಪ್ರವೇಶಾವಕಾಶವನ್ನು ವಿಸ್ತರಿಸಲು, ಧಾನ್ಯಗಳ ಮೌಲ್ಯ ಸರಪಳಿಯನ್ನು ಬಲಪಡಿಸಲು, ಸ್ಥಳೀಯ ಸಂಸ್ಕರಣೆ ಹಾಗೂ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಆದಾಯವನ್ನು ಹೆಚ್ಚಿಸಲು ಇದು ನೆರವಾಗಲಿದೆ. ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ ಹಾಗೂ ಕಲಬುರಗಿ ಕೃಷಿ ಇಲಾಖೆ ಸಹಯೋಗದಲ್ಲಿ ಸ್ಥಳೀಯವಾಗಿ ಬೆಳೆಯುವ ತೊಗರಿಬೇಳೆ, ಉದ್ದಿನಬೇಳೆ, ಹೆಸರುಬೇಳೆ ಮತ್ತು ಕಡಲೆಬೇಳೆ ಬಳಸಿ, 6 ಬಗೆಯ ರೆಡಿ ಟು ಈಟ್ ಎನರ್ಜಿ ಬಾರ್‌ಗಳನ್ನು ತಯಾರಿಸಿ ಪ್ರಾಯೋಗಿಕವಾಗಿ ಪರಿಚಯಿಸಿರುವುದು ಶ್ಲಾಘನೀಯ ಪ್ರಯತ್ನ.

ಬಿಬಿಸಿಯು ಮೌಲ್ಯವರ್ಧನೆ, ಅಂಗಾಂಶ ಸಂವರ್ಧನೆ ಮತ್ತು ಜೈವಿಕ ಗೊಬ್ಬರ ತಂತ್ರಜ್ಞಾನಗಳಲ್ಲಿ ಆರಂಭಿಕ ಹಂತದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಕಲಬುರಗಿಯ ಕಾಳುಗಳನ್ನು ಕಚ್ಚಾ ಉತ್ಪನ್ನದಿಂದ ಮೌಲ್ಯವರ್ಧಿತ ಹಾಗೂ ಬ್ರಾಂಡೆಡ್ ಉತ್ಪನ್ನಗಳಾಗಿ ಪರಿವರ್ತಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಮುಂದುವರಿದು ಇದು ರೈತರಿಗೆ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ಪಡೆಯಲು, ಎಫ್‌ಪಿಒಗಳು, ಎಸ್‌ಎಚ್‌ಜಿಗಳು ಮತ್ತು ಎಂಎಸ್‌ಎಂಇಗಳಿಗೆ ಹೊಸ ಉದ್ಯಮ ತೆರೆಯಲು ಮತ್ತು ಉತ್ತಮ ಪೌಷ್ಟಿಕತೆ ಹಾಗೂ ಬಲಿಷ್ಠ "ಕಲಬುರಗಿ ಪಲ್ಸಸ್" ಬ್ರ್ಯಾಂಡ್ ರೂಪುಗೊಳ್ಳಲು ಹಾಗೂ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ರೈತರು ಹಾಗೂ ಅವರ ಉತ್ಪನ್ನಗಳಿಗೆ ಉತ್ತಮ ಮೌಲ್ಯ ಮತ್ತು ಮಾರುಕಟ್ಟೆ ದೊರಕಿಸುವುದು ಗ್ಯಾರಂಟಿ ಸರ್ಕಾರದ ಉದ್ದೇಶವಾಗಿದೆ ಎಂದಿದ್ದಾರೆ.
Kalyana Karnataka: ಭೀಮಾ ಪ್ರದೇಶದ ನೀರಾವರಿ ಯೋಜನೆ ಬಗ್ಗೆ ಚರ್ಚೆ
ಕಲಬುರಗಿಯಲ್ಲಿ ಭೀಮಾ ಪ್ರದೇಶದ ನೀರಾವರಿ ಯೋಜನೆಗಳ ಕುರಿತು ನೀರಾವರಿ ಅಧಿಕಾರಿಗಳು, ರೈತ ಮುಖಂಡರು ಹಾಗೂ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಬಚಾವತ್ ಆಯೋಗದ ಐತೀರ್ಪಿನಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ 15 ಟಿಎಂಸಿ ನೀರು ನಿಯಮಿತವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಮಹಾರಾಷ್ಟ್ರದಿಂದ ನೀರು ಹರಿವಿನ ಪರಿಸ್ಥಿತಿ, ನೀರಿನ ಬಳಕೆ ಹಾಗೂ ಭೀಮಾ ಪ್ರದೇಶದ ಮೇಲಿನ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲು ಅಧಿಕಾರಿಗಳ ತಂಡ ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಗತ್ಯವಿರುವ ನೀರಾವರಿ ಮೂಲಸೌಕರ್ಯಗಳ ನಿರ್ಮಾಣದ ಬಗ್ಗೆಯೂ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಧಿಕಾರಿಗಳ ವರದಿ ಆಧರಿಸಿ ನೀರಾವರಿ ಸಚಿವರು ಹಾಗೂ ಈ ಭಾಗದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.


Click it and Unblock the Notifications
