ಕಳಸಾ ಬಂಡೂರಿ, ಮಹದಾಯಿ ಯೋಜನೆ: ಬಿಜೆಪಿಯಿಂದ ವಂಚನೆ: ಎಎಪಿ
ಬೆಂಗಳೂರು, ಜನವರಿ 03: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಕರ್ನಾಟಕದ ಜನರನ್ನು ವಂಚಿಸುತ್ತಿವೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆಪಾದಿಸಿದೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡ ಹಾಗೂ ಮಹದಾಯಿ ನದಿವಿವಾದ ನ್ಯಾಯಮಂಡಳಿಯಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸಿದ್ದ ಬ್ರಿಜೇಶ್ ಕಾಳಪ್ಪ ಬಿಜೆಪಿ ವಿರುದ್ಧ ದೂರಿದರು.
ಚುನಾವಣೆ ಉದ್ದೇಶದಿಂದ ಬಿಜೆಪಿ ಸರ್ಕಾರಗಳು ಕೇವಲ ಚುನಾವಣೆ ಉದ್ದೇಶದಿಂದ ಕೇಂದ್ರ ಜಲ ನಿಗಮವು (ಸಿಡಬ್ಲ್ಯೂಸಿ) ಅನುಮತಿ ನೀಡಿದೆ ಎಂದು ತಿಳಿಸಿದೆ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಮಹದಾಯಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ಸಿಡಬ್ಲ್ಯೂಸಿ ಅನುಮತಿ ಪತ್ರದಂತೆ ಕಾಣುವ ದಿನಾಂಕವಿಲ್ಲದ ಪತ್ರವೊಂದನ್ನು (ಸಂಖ್ಯೆ T-28027/2/2022-PA(S)DTE) ಡಿಸೆಂಬರ್ 29, 2022ರಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಮಹದಾಯಿ ವಿವಾದದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರೆಕಿಸಿಕೊಟ್ಟಿದೆ ಎಂದು ಇಷ್ಟಕ್ಕೇ ಬಿಂಬಿಸುವುದು ಸರಿಯಲ್ಲ.

2002ರಲ್ಲಿ ಅನುಮೋದನೆ ನೀಡಲಿಲ್ಲ
ಈ ಹಿಂದೆ, ಗೋವಾ ವ್ಯಕ್ತಪಡಿಸಿದ್ದ ಆತಂಕವನ್ನು ಪರಿಗಣಿಸಿದ ನಂತರವೂ ಕೇಂದ್ರ ಸರ್ಕಾರವು ಏಪ್ರಿಲ್ 30, 2002ರಂದು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಆಗ ಕೂಡ ಇದೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಅಧಿಕಾರದಲ್ಲಿತ್ತು. ಕೇವಲ ಐದು ತಿಂಗಳ ನಂತರ, ಅಂದರೆ ಸೆಪ್ಟೆಂಬರ್ 19, 2002ರಂದು ತಾತ್ವಿಕ ಒಪ್ಪಿಗೆಯನ್ನು ಬಿಜೆಪಿ ಸರ್ಕಾರವು ಅಮಾನತಿನಲ್ಲಿ ಇಟ್ಟಿತು. ಕರ್ನಾಟಕಕ್ಕೆ ಬಿಜೆಪಿ ಮಾಡಿದ್ದ ಈ ದ್ರೋಹವನ್ನು ನಾವು ಮರೆಯಬಾರದು ಎಂದು ಅವರು ವಿವರಿಸಿದರು.

ಚುನಾವಣೆ ಹಿನ್ನೆಲೆ ಸಿಡಬ್ಲ್ಯೂಸಿ ಒಪ್ಪಿಗೆ
2006ರಲ್ಲಿ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಇದರಿಂದ 22 ಅಕ್ಟೋಬರ್ 2010 ರಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ನ್ಯಾ. ಜೆ.ಎಂ.ಪಂಚಾಲ್‌ರವರ ನೇತೃತ್ವದಲ್ಲಿ ಮಹದಾಯಿ ನದಿ ವಿವಾದ ನ್ಯಾಯಮಂಡಳಿಯನ್ನು (ಎಂಡಬ್ಲ್ಯೂಡಿಟಿ) ರಚಿಸಿತು. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳ ವಾದಗಳನ್ನು ಆಲಿಸಿದ ಎಂಡಬ್ಲ್ಯೂಡಿಟಿ ಆಗಸ್ಟ್ 14, 2018 ರಂದೇ ತೀರ್ಪು ನೀಡಿತು.
ಯೋಜನೆಗೆ ಈಗ ಸಿಡಬ್ಲ್ಯೂಸಿ ಒಪ್ಪಿಗೆ ದೊರೆತಿರುವುದು ಡಬಲ್ ಎಂಜಿನ್ ಸರ್ಕಾರದ ಸಾಮರ್ಥ್ಯ ಎಂಬ ಬಿಜೆಪಿಯ ವಾದವು ನಿಜವೇ ಆಗಿದ್ದಲ್ಲಿ ಜುಲೈ 26, 2019 ರಂದು ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗಲೇ ಯೋಜನೆಗೆ ಸಿಡಬ್ಲ್ಯೂಸಿ ಒಪ್ಪಿಗೆ ನೀಡಬೇಕಿತ್ತು. ಚುನಾವಣೆ ಸಮೀಪಿಸುವವರೆಗೆ ಕಾಯುವ ಅಗತ್ಯವೇನಿತ್ತು? ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

100 ಗ್ರಾಮಗಳಿಗೆ ನೀರು ಒದಗಿಸಲಿ
ಮಹದಾಯಿ ಹೋರಾಟಗಾರರು ಹಾಗೂ ಆಮ್ ಆದ್ಮಿ ಪಾರ್ಟಿ ಮುಖಂಡರಾದ ವಿಕಾಸ್ ಸೊಪ್ಪಿನ್ ಮಾತನಾಡಿ, ಬಿಜೆಪಿಯು ಈ ವಿಚಾರದಲ್ಲಿ ಬೀಗಬೇಕಾದ ಅಗತ್ಯವಿಲ್ಲ. ಬದಲಾಗಿ, ಈ ಯೋಜನೆಯಿಂದ ಅನುಕೂಲ ಪಡೆಯಬಹುದಾದ ಹುಬ್ಬಳ್ಳಿ-ಧಾರವಾಡ, ನರಗುಂದ, ನವಲಗುಂದ, ಬಾದಾಮಿ, ರೋಣ, ಗದಗ ಹಾಗೂ ಸುಮಾರು 100 ಗ್ರಾಮಗಳಿಗೆ ಶೀಘ್ರವೇ ಕುಡಿಯುವ ನೀರು ಒದಗಿಸಲು ಗಂಭೀರ ಪ್ರಯತ್ನ ಮಾಡಲಿ. ಆಮ್ ಆದ್ಮಿ ಪಾರ್ಟಿಯು ಭಾಷೆ, ಸಂಸ್ಖೃತಿ, ಗಡಿ ಹಾಗೂ ನೀರಿನ ಹಕ್ಕಿಗೆ ಸಂಬಂಧಿಸಿ ರಾಜ್ಯ ಹಿತಾಸಕ್ತಿಗೆ ಸದಾ ಬದ್ಧವಾಗಿದೆ ಎಂದು ಹೇಳಿದರು.

84 ವರ್ಷದ ಕೆಂಪಣ್ಣರನ್ನು ರಾತ್ರೋರಾತ್ರಿ ಬಂಧಿಸಿದರು
2022ರ ಏಪ್ರಿಲ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್‌ರವರು ಆಗ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ನಂತರ ಡಿಸೆಂಬರ್ 31ರಂದು ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪ್ರಸಾದ್ ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. 2023ರ ಜನವರಿ 1ರಂದು ಉದ್ಯಮಿ ಪ್ರಸಾದ್‌ರವರು ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪ್ರಕರಣಗಳಲ್ಲಿ ಸಚಿವ ಹಾಗೂ ಶಾಸಕರನ್ನು ಪೊಲೀಸರು ಬಂಧಿಸಿಲ್ಲ. ಆದರೆ ಸರ್ಕಾರದ ಕಮಿಷನ್ ದಂಧೆಯನ್ನು ಬಹಿರಂಗಪಡಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ 84 ವರ್ಷದ ಕೆಂಪಣ್ಣರವರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟರಿಗೆ ರಕ್ಷಣೆಯಿದೆ, ಭ್ರಷ್ಟಾಚಾರ ವಿರೋಧಿಗಳಿಗೆ ರಕ್ಷಣೆಯಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.












Click it and Unblock the Notifications