ಕಲಬುರಗಿಗೆ ಮಂಗಳವಾರ ಪ್ರಣಬ್ ಮುಖರ್ಜಿ ಭೇಟಿ
ಕಲಬುರಗಿ, ಡಿಸೆಂಬರ್ 21 : 'ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವವು ಮಂಗಳವಾರ ನಡೆಯಲಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ' ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಯ್ಯ ಹೇಳಿದ್ದಾರೆ.
ಡಿಸೆಂಬರ್ 22ರ ಮಂಗಳವಾರ ಕಲಬುರಗಿ ನಗರದ ಇ.ಎಸ್.ಐ.ಸಿ. ಆಡಿಟೋರಿಯಂ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಪೌರಾಡಳಿತ ಸಚಿವ ಡಾ. ಖಮರುಲ್ ಇಸ್ಲಾಂ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಘಟಿಕೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. [ಡಿ.22, 23ರಂದು ಪ್ರಣಬ್ ರಾಜ್ಯ ಪ್ರವಾಸ]

ಘಟಿಕೋತ್ಸವದಲ್ಲಿ 2011 ರಿಂದ ಈವರೆಗೆ ಐಎಂಎ, ಐಎಂಎಸ್ಸಿ, ಬಿಬಿಎ, ಎಂಎ, ಎಂಎಸ್ಸಿ, ಎಂಎಸ್‍ಡಬ್ಲ್ಯೂ, ಎಂಕಾಂ, ಎಂಬಿಎ, ಎಂಸಿಎ ಮತ್ತು ಎಂಫಿಲ್‍ಗಳಲ್ಲಿ ಪದವಿ ಪಡೆದ ಒಟ್ಟು 744 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಇವರಲ್ಲಿ ವಿವಿಧ ವಿಭಾಗಗಳಲ್ಲಿ ಹೆಚ್ಚಿನ ಅಂಕ ಪಡೆದ ಸ್ನಾತಕೋತ್ತರ ಪದವಿಯ 38 ಮತ್ತು ಸ್ನಾತಕ ಪದವಿಯ 10 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 48 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ. [ಕಲಬುರಗಿ : ನಂದಿವನದ ಎತ್ತುಗಳಿಗೆ ಜಿಲ್ಲಾಡಳಿತದ ನೆರವು]
ಹೊಸ ಕೋರ್ಸ್ ಆರಂಭ : 'ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಗೀತ ಮತ್ತು ಫೈನ್ ಆರ್ಟ್, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್, ಪತ್ರಿಕೋದ್ಯಮ, ಮುಂತದ ಹೊಸ-ಹೊಸ ಕೋರ್ಸ್‌ಗಳನ್ನು ಆರಂಭಿಸಲು ಚಿಂತನೆ ನಡೆದಿದೆ' ಎಂದು ಎಚ್.ಎಂ.ಮಹೇಶ್ವರಯ್ಯ ತಿಳಿಸಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಬೆಳಗ್ಗೆ ಬೀದರ್‌ಗೆ ಆಗಮಿಸಲಿದ್ದು, ಅಲ್ಲಿಂದ ಕಲಬುರಗಿಗೆ ತೆರಳಿ, ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಬೆಂಗಳೂರಿಗೆ ತೆರಳಲಿರುವ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications