ಹಾಸನದ ಕಬ್ಬಳಿಯಲ್ಲಿ ನ.21ರಿಂದ ರಾಸುಗಳ ಜಾತ್ರೆ
ಹಾಸನ, ನವೆಂಬರ್ 21 : ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕಬ್ಬಳಿ ಬಸವೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ನವಂಬರ್ 21ರಿಂದ 84ನೇ ವರ್ಷದ ಬೃಹತ್ ದನಗಳ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ನವಂಬರ್ 28ರವರೆಗೆ ನಡೆಯಲಿದೆ.
ತಪೋವನ ಮತ್ತು ಪಂಚಲಿಂಗಗಳಿಂದ ಕೂಡಿದ ಪುಣ್ಯ ಕ್ಷೇತ್ರವಾದ ಕಬ್ಬಳಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಅವರೆಲ್ಲರಿಗೂ ಪ್ರಸಾದ ಮತ್ತು ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.
ವೇದಿಕೆ ಕಾರ್ಯಕ್ರಮಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಕಬ್ಬಳಿಯ ಶಿವಪುತ್ರ ಸ್ವಾಮೀಜಿ ಅವರು ಖುದ್ದು ಕ್ಷೇತ್ರದಲ್ಲೇ ಇದ್ದು ಎಲ್ಲಾ ಸಿದ್ಧತೆಗಳನ್ನು ಮಾಡಿಸುತ್ತಿದ್ದಾರೆ. [ಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ]

ನ.21 ರಂದು ಬೆಳಗ್ಗೆ 7 ಗಂಟೆಗೆ ಪಂಚಾಮೃತ ಅಭಿಷೇಕದ ಮೂಲಕ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಅದೇ ದಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಕೃಷಿ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡುವರು.
ಈ ದನಗಳ ಜಾತ್ರೆಯಲ್ಲಿ ದನಗಳ ಮಾರಾಟವಾಗಲೀ, ಖರೀದಿಯಾಗಲೀ ನಡೆಯುವುದಿಲ್ಲ. ಬಸವೇಶ್ವರ ದೇವರ ಆಶೀರ್ವಾದ ಪಡೆಯಲು ರಾಸುಗಳನ್ನು ಜಾತ್ರೆಗೆ ಕರೆತರಲಾಗುತ್ತದೆ. ವಿವಿಧ ತಳಿಗಳ ಆರೋಗ್ಯಕರ ರಾಸುಗಳನ್ನು ನೋಡಲೆಂದೇ ಅಪಾರ ಭಕ್ತರು ಜಾತ್ರೆಗೆ ಬರುತ್ತಾರೆ. [ಹಾಸನಾಂಬೆಗೆ ಕೋಟಿಗಟ್ಟಲೆ ಧನ, ಕನಕ ಅರ್ಪಣೆ]

ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7ರವರೆಗೆ ಉತ್ಸವ, ಪೂಜಾ ಕಾರ್ಯಕ್ರಮಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 23ರಂದು ಶ್ರೀ ಬಸವೇಶ್ವರ ಸ್ವಾಮಿಯ ತೆಪ್ಪೋತ್ಸವ ಹಾಗೂ ಸಂಜೆ ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಪುತ್ಥಳಿ ಮತ್ತು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೆಪ್ಪೋತ್ಸವ ನಡೆಯಲಿದೆ.
ಶ್ರೀ ಆದಿಚುಂಚನಗಿರಿ ಮಠದಿಂದ ಪ್ರತಿ ತಿಂಗಳು ನಡೆಸುವ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮವನ್ನು ಈ ತಿಂಗಳು ನವೆಂಬರ್ 25ರಂದು ಕಬ್ಬಳಿ ಕ್ಷೇತ್ರದಲ್ಲಿ ನಡೆಸಲಾಗುವುದು. ಅಲ್ಲದೆ, ನವೆಂಬರ್ 26 ಮತ್ತು 27ರಂದು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. 28ರಂದು ಜಾತ್ರಾ ಮಹೋತ್ಸವ ಪೂರ್ಣಗೊಳ್ಳಲಿದೆ.












Click it and Unblock the Notifications