ಬೆಂಗಳೂರು ನಗರಕ್ಕೆ ಹೊಸ ಜಿಲ್ಲಾಧಿಕಾರಿ ನೇಮಿಸಿದ ಸರ್ಕಾರ
ಬೆಂಗಳೂರು, ಡಿಸೆಂಬರ್ 18; ಕರ್ನಾಟಕ ಸರ್ಕಾರ ಬೆಂಗಳೂರು ನಗರಕ್ಕೆ ಹೊಸ ಜಿಲ್ಲಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕೆ. ಶ್ರೀನಿವಾಸ್ ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು.
ಕರ್ನಾಟಕ ಸರ್ಕಾರ ಶನಿವಾರ ರಾತ್ರಿ ಹೊಸ ಜಿಲ್ಲಾಧಿಕಾರಿ ನೇಮಕದ ಕುರಿತು ಆದೇಶ ಹೊರಡಿಸಿದೆ. ಹಿಂದುಳಿದ ವರ್ಗಗಳ ಆಯುಕ್ತರಾಗಿದ್ದ ಕೆ. ಎ. ದಯಾನಂದ (ಐಎಎಸ್ 2012ನೇಬ ಬ್ಯಾಚ್) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೂತನ ಡಿಸಿಯಾಗಿ ನೇಮಕ ಮಾಡಲಾಗಿದೆ.
ಕೆ. ಎ. ದಯಾನಂದ ಎರಡನೇ ಬಾರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದಯಾನಂದ ಬೆಂಗಳೂರು ನಗರ ಡಿಸಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

ಶಿವಮೊಗ್ಗ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿರುವ ಕೆ. ಎ. ದಯಾನಂದ ಸದ್ಯ ಹಿಂದುಳಿದ ವರ್ಗಗಳ ಆಯುಕ್ತರಾಗಿದ್ದರು. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಅಲ್ಲದೇ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಕೈಗೊಂಡಿದೆ. ಆದ್ದರಿಂದ ತಕ್ಷಣ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಸೇವೆಯಿಂದ ಅಮಾನತು; ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕೆ. ಶ್ರೀನಿವಾಸ್ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತು ಮಾಡಲಾಗಿದೆ.
ಕೆ. ಶ್ರೀನಿವಾಸ್ ಕೇಂದ್ರ ಚುನಾವಣಾ ಆಯೋಗದ ನಿರ್ದೇಶದ ಮೇರೆಗೆ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಕರ್ನಾಟಕಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ಪಿ. ಎನ್. ದೇಸಾಯಿ ನೇತೃತ್ವದ ವಿಭಾಗೀಯ ಪೀಠವು ಅಮಾನತು ಆದೇಶಕ್ಕೆ ತಡೆ ನೀಡಲಾಗುವುದಿಲ್ಲ ಎಂದು ಹೇಳಿದೆ.
ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೆ. ಎ. ಶ್ರೀನಿವಾಸ್ ಪರ ವಕೀಲರು, ಯಾವುದೇ ದಾಖಲೆ ಇಲ್ಲದಿದ್ದರೂ ಅರ್ಜಿದಾರರನ್ನು ಅಮಾನತು ಮಾಡಲಾಗಿದೆ. ಯಾವುದೇ ದಾಖಲೆ ಇಲ್ಲದಿದ್ದರೂ ಕೇಂದ್ರ ಚುನಾವಣಾ ಆಯೋಗವು ಅಮಾನತಿಗೆ ಶಿಫಾರಸ್ಸಿಗೆ ಮಾಡಿದೆ ಎಂದು ವಾದ ಮಂಡಿಸಿದ್ದರು.
ಕೇಂದ್ರ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರು, ಮೇಲ್ನೋಟಕ್ಕೆ ಸಾಕ್ಷ್ಯಗಳಿದ್ದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅಮಾನತು ಮಾಡಲು ಆದೇಶಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ಅಮಾನತು ಆದೇಶಕ್ಕೆ ತಡೆ ನೀಡಬಾರದು ಎಂದು ಮನವಿ ಮಾಡಿದ್ದರು.
ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಿಬಿಎಂಪಿಯ ಕೆಲವು ಅಧಿಕಾರಿಗಳನ್ನು ಸಹ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಮಾತು ಮಾಡಲಾಗಿದೆ.

ಕೆ. ಎ. ದಯಾನಂದ ಪರಿಚಯ; 1976 ಮಾರ್ಚ್ 26ರಂದು ಕೆಸ್ತೂರು ಕೊಪ್ಪದಲ್ಲಿ ಜನಿಸಿದ ಕೆ. ಎ. ದಯಾನಂದ 2012ನೇ ಬ್ಯಾಚ್ ಐಎಎಸ್ ಅಧಿಕಾರಿ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮಾಡಿ ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಕೆಎಎಸ್ ಅಧಿಕಾರಿಯಾದರು. ಸರ್ಕಾರಿ ಸೇವೆ ಮಾಡುತ್ತಲೇ ಐಎಎಸ್ ಪರೀಕ್ಷೆ ಪಾಸು ಮಾಡಿದರು.
ಬೆಂಗಳೂರು ನಗರ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ, ವಿವಿಧ ಇಲಾಖೆಗಳಲ್ಲಿ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಜೀವನಾನುಭವ ಕೃತಿ 'ಹಾದಿಗಲ್ಲು' ಎಂಬ ಪುಸ್ತಕ ಸಹ ಪ್ರಕಟವಾಗಿದೆ.












Click it and Unblock the Notifications