ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ
ಬೆಂಗಳೂರು, ಆ.6: ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಕಾತಿ ವೇಳೆ ಮಹಿಳೆಯರಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ.33ಕ್ಕೆ ಹೆಚ್ಚಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಬೆಂಗಳೂರಿನ ಸಿಓಡಿ ಕೇಂದ್ರ ಕಚೇರಿಯಲ್ಲಿ ಆ.6 ಬುಧವಾರದಂದು ಮಹಿಳಾ ಮತ್ತು ಮಕ್ಕಳ ದೌರ್ಜನ್ಯಗಳನ್ನು ನಿಭಾಯಿಸುವ ಕುರಿತಂತೆ ಏರ್ಪಡಿಸಲಾಗಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ನೇಮಕಾತಿ ಸಂಬಂಧ ಶೇ.10 ರಷ್ಟಿದ್ದ ಮೀಸಲಾತಿಯನ್ನು ಶೇ.20ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಶೇ.33 ಕ್ಕೆ ಹೆಚ್ಚಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ಆರು ಕೋಟಿ ಜನಸಂಖ್ಯೆಗೆ ಒಂದು ಲಕ್ಷ ಪೊಲೀಸರಿದ್ದಾರೆ. ಇನ್ನೂ22 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ವರ್ಷ 8500 ಸಿಬ್ಬಂದಿ ನೇಮಿಸಲು ಸಿದ್ಧತೆ ನಡೆಸಿದ್ದು, ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.
ಹೊಸ ಸವಾಲುಗಳಿಗೆ ಪೊಲೀಸರನ್ನು ಸಜ್ಜುಗೊಳಿಸಲು ಈ ವರ್ಷ ಹೊಸದಾಗಿ ಆರು ರಾಜ್ಯಮಟ್ಟದ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಪೊಲೀಸರು ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಅವರು ಪೊಲೀಸರಿಗೆ ಸಲಹೆ ನೀಡಿದರು.
ಕಾಲಮಿತಿಯಲ್ಲಿ ತನಿಖೆ ಪೂರ್ಣ: ಎಡಿಜಿಪಿ ರವೀಂದ್ರನಾಥ್ ಹಾಗೂ ಮಲ್ಲಿಕಾರ್ಜುನ ಬಂಡೆ ಪ್ರಕರಣವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಎಡಿಜಿಪಿ ರವೀಂದ್ರನಾಥ್ ಪ್ರಕರಣ ಕೋರ್ಟ್ ನಲ್ಲಿದೆ. ಸಿಐಡಿ ವಿಚಾರಣೆ ಮುಗಿದಿದ್ದು, ವರದಿ ಸಲ್ಲಿಸಲಾಗಿದೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.












Click it and Unblock the Notifications