ಉಪ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ರಾಜೀನಾಮೆ: ಮಹತ್ವದ ಮಾಹಿತಿ ನೀಡಿದ ಕೆ ಜೆ ಜಾರ್ಜ್
ಚಾಮರಾಜನಗರ, ನವೆಂಬರ್ 20: ಉಪ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ಹೇಳಿಕೆ ಕುರಿತು ಇಂಧನ ಸಚಿವ ಕೆ ಎ ಜಾರ್ಜ್ ಅವರು ಕಿಡಿಕಾರಿದ್ದಾರೆ. ವಿಜಯೇಂದ್ರ ಕೇಳಿ ಸಿಎಂ ಮಾಡಿಲ್ಲ, ಸಿದ್ದರಾಮಯ್ಯ ದಕ್ಷರಿದ್ದಾರೆ ಅವರೆ ಮುಂದುವರೆಯುತ್ತಾರೆ ಎಂದು ಸಚಿವ ಜಾರ್ಜ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ವಿಜಯೇಂದ್ರನನ್ನು ಕೇಳಿ ನಾವು ಚೀಫ್ ಮಿನಿಸ್ಟರ್ ಮಾಡಿದ್ವಾ..?, ಕಾಂಗ್ರೆಸ್ ನ ಹೈಕಮಾಂಡ್ ಮುಖ್ಯಮಂತ್ರಿ ಮಾಡಿರುವುದು, ಸಿದ್ದರಾಮಯ್ಯ ದಕ್ಷರಿದ್ದಾರೆ, ಪ್ರಾಮಾಣಿಕರಿದ್ದಾರೆ ಅವರೆ ಮುಂದುವರಿಯುತ್ತಾರೆ ಎಂದು ಸಚಿವ ಜಾರ್ಜ್ ತಿಳಿಸಿದರು.

ನಕ್ಸಲ್ ಚಟುವಟಿಕೆ ಕುರಿತು ಮಾತನಾಡಿ, ನಕ್ಸಲ್ ಚಟುವಟಿಕೆ ಮೊದಲಿನಿಂದಲೂ ಇತ್ತು, ನಾನು ಗೃಹ ಸಚಿವನಾಗಿದ್ದಾಗ ಹಲವರು ಶರಣಾಗತಿಯಾಗಿದ್ದರು. ಇಲ್ಲಿಯವರೆಗೂ ನಕ್ಸಲ್ ಚಟುವಟಿಕೆ ಇರಲಿಲ್ಲ, ನಾಲ್ಕು ವರ್ಷದ ಹಿಂದೆ ಆಕ್ಟೀವ್ ಆಗಿದ್ದಾರೆ, ಅದನ್ನು ಮಟ್ಟ ಹಾಕುತ್ತೇವೆ ಎಂದರು.
ನನಗೆ ಆಪರೇಷನ್ ಕಮಲ ಆಫರ್ ಬಂದಿಲ್ಲ: ಕೃಷ್ಣಮೂರ್ತಿ
ಆಪರೇಷನ್ ಕಮಲದ ಆಫರ್ ಗಳು ನನಗ್ಯಾವುದು ಬಂದಿಲ್ಲ ಎಂದು ಕೊಳ್ಳೇಗಾಲ ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಬಿಜೆಪಿ ಬಿಟ್ಟು ಬಂದವನು ನಾನು, ನನಗೆ ಯಾವುದೇ ಆಫರ್ ಬಂದಿಲ್ಲ- ಬರುವುದೂ ಇಲ್ಲಾ, ನನ್ನನ್ನು ಯಾರೂ ಸಂಪರ್ಕಿಸಿಯೂ ಇಲ್ಲಾ, ಬಿಜೆಪಿ ಆಸೆ- ಆಮೀಷಕ್ಕೆ ಬಲಿಯಾಗುವವನಲ್ಲ ಎಂದು ಕೊಳ್ಳೇಗಾಲ ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಅನುದಾನಕ್ಕೆ ಕತ್ತರಿ ಎಂಬ ಅಸಮಾಧಾನ ಕುರಿತು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಶಾಸಕರ ಅನುದಾನಕ್ಕೆ ಕೊರತೆ ಆಗಿಲ್ಲ, ಮುಖ್ಯಮಂತ್ರಿಗಳು ಸೇರಿದಂತೆ ಇಲಾಖೆ ಸಚಿವರು ಸಾಕಷ್ಟು ಅನುದಾನ ಕೊಟ್ಟಿದ್ದಾರೆ, 136 ಶಾಸಕರಿಗೂ ಮುಖ್ಯಮಂತ್ರಿ ವಿಶೇಷ ಅನುದಾನ ಬಂದಿದೆ ಎಂದರು.
ಈ ಕುರಿತು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಯಾವತ್ತೂ ಕೂಡ ಪಾರ್ಟಿಯಲ್ಲಿ ಮಾತನಾಡಿಲ್ಲ, ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರನ್ನು ಕಂಡರೇ ಹೊಟ್ಟೆ ಕಿಚ್ಚು ಅಂತ ಹೇಳಿದರು.
ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ಹಾಗೂ ಗ್ಯಾರಂಟಿಗಳಿಗೂ ಸಂಬಂಧವಿಲ್ಲ. ಈಗಾಗಲೇ ಸರ್ಕಾರಿ ನೌಕರರು, ಎರಡು ಕಾರು ಹೊಂದಿರುವವರು, ತೆರಿಗೆ ಕಟ್ಟುತ್ತಿದ್ದವರು, 3 ಹೆಕ್ಟೇರ್ ಗಿಂತ ಹೆಚ್ಚು ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಗಳನ್ನು ಬಳಸುತ್ತಿದ್ದಾರೆ. ಇಂಥವರು ತಾವೇ ಸ್ವತಃ ಕಾರ್ಡ್ ಗಳನ್ನು ವಾಪಸ್ ನೀಡಬೇಕಿತ್ತು ಎಂದು ತಿಳಿಸಿದ್ದಾರೆ. ಈಗಾ ನಾವು ಕಾರ್ಡ್ ಗಳನ್ನು ಪರಿಷ್ಕರಣೆ ಮಾಡುವ ಪರಿಸ್ಥಿತಿ ಬಂದಿದೆ. ಈ ಕೆಲಸ ಮುಂಚೆನೇ ಮಾಡಬೇಕಾಗಿತ್ತು. ತಡವಾದರೂ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications