ಎಸಿಬಿ ವಿರುದ್ಧ ನ್ಯಾ. ಸಂದೇಶ್ ಮತ್ತೆ ಕಿಡಿ, ಉಪತಹಸೀಲ್ದಾರ್ ಮಹೇಶ್‌ಗೆ ಜಾಮೀನು
ಬೆಂಗಳೂರು ಜು.21. ಎಸಿಬಿ ರಚಿಸಿರುವ ಉದ್ದೇಶವೇನು? ಭ್ರಷ್ಟಚಾರ ನಿಯಂತ್ರಣ ಮಾಡಲೋ? ಅಥವಾ ಭ್ರಷ್ಟಾಚಾರ ಎಸಗುವವರಿಗೆ ಬೆಂಬಲ ನೀಡಲೋ? ಎಸಿಬಿಗೆ ನಾಚಿಕೆಯಾಗಬೇಕು" ಎಂದು ಹೈಕೋರ್ಟ್ ನ್ಯಾ. ಎಚ್.ಪಿ. ಸಂದೇಶ್ ಎಸಿಬಿಗೆ ಮತ್ತೆ ಛೀಮಾರಿ ಹಾಕಿದ್ದಾರೆ.
ಅಲ್ಲದೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿನ ಆರೋಪಿ ಉಪ ತಹಶೀಲ್ದಾರ್ ಪಿ ಎಸ್ ಮಹೇಶ್ ಬಂಧನವಾಗಿ 60 ದಿನಗಳು ಕಳೆದರೂ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಅವರಿಗೆ ಗುರುವಾರ ವಿಚಾರಣಾಧೀನ ನ್ಯಾಯಾಲಯದಲ್ಲಿ ಡೀಫಾಲ್ಟ್ ಜಾಮೀನು ದೊರೆತಿದೆ.
ಹಾಗಾಗಿ, ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಮನವಿಯನ್ನು ಮಹೇಶ್ ಪರ ವಕೀಲರು ಹಿಂಪಡೆದರು. ಬೆಳಗ್ಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಪೀಠ, ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಎಸಿಬಿ ಪರ ವಕೀಲರನ್ನು ಉದ್ದೇಶಿಸಿ ನ್ಯಾ. ಸಂದೇಶ್ "ಎಸಿಬಿ ಪ್ರಾಮಾಣಿಕತೆ ಕುರಿತು ವಾದ ಮಂಡಿಸಿದಿರಲ್ಲಾ, ಆರೋಪ ಪಟ್ಟಿ ಸಲ್ಲಿಸದೇ ಪರೋಕ್ಷವಾಗಿ ಆರೋಪಿಗೆ ಏಕೆ ಬೆಂಬಲ ನೀಡಿದಿರಿ. 60 ದಿನಗಳಾದರೂ ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲವೇಕೆ? ಆರೋಪ ಪಟ್ಟಿ ಸಲ್ಲಿಸಲು ಕಾಲಮಿತಿ ಏನು?" ಎಂದರು.
ಎಸಿಬಿ ಪರ ವಕೀಲರು, "ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿತ್ತು. ಹಾಗಾಗಿ, ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ" ಎಂದು ಉತ್ತರಿಸಿದರು. ಸಿಟ್ಟಿಗೆದ್ದ ನ್ಯಾ. ಸಂದೇಶ್ "ಮೊದಲಿಗೆ ಆರೋಪ ಪಟ್ಟಿ ಸಲ್ಲಿಸಿ, ಸಿಆರ್ಪಿಸಿ ಸೆಕ್ಷನ್ 173(8) ಅನ್ನು ಬಳಕೆ ಮಾಡುವ ಮೂಲಕ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬಹುದಿತ್ತಲ್ಲವೇ? ಇದು, ಆರೋಪಿಯು ನ್ಯಾಯಾಲಯದ ವ್ಯಾಪ್ತಿಯಿಂದ ಪಾರಾಗಲೂ ಸಹಕರಿಸುವುದಲ್ಲದೆ ಮತ್ತೇನು? ನಿಮ್ಮ (ಎಸಿಬಿ) ಸಂಸ್ಥೆಯು ಅತ್ಯಂತ ಪ್ರಾಮಾಣಿಕವಾಗಿದೆ ಎಂದು ನೀವು ವಾದ ಮಂಡಿಸಿದ್ದೀರಿ. ಆರೋಪ ಪಟ್ಟಿ ಸಲ್ಲಿಸದೇ ಪರೋಕ್ಷವಾಗಿ ನೀವೇಕೆ ಆರೋಪಿಗೆ ಬೆಂಬಲ ನೀಡುತ್ತಿದ್ದೀರಿ?" ಎಂದರು.
"ಜಾಮೀನು ಮನವಿಯನ್ನು ವಿಲೇವಾರಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಪ್ರಕರಣದಲ್ಲಿ ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಇದರರ್ಥ ನೀವು ಅವರ (ಆರೋಪಿ) ಜೊತೆ ಕೈಜೋಡಿಸಿದ್ದೀರಿ. ಹೌದಲ್ಲವೇ? ಆರೋಪ ಪಟ್ಟಿಯನ್ನು 60 ದಿನಗಳ ಒಳಗೆ ಸಲ್ಲಿಸಬೇಕು ಎಂಬುದು ನಿಮಗೆ ತಿಳಿದಿದೆಯೋ, ಇಲ್ಲವೋ? ಹೀಗಿರುವಾಗ, ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಆರೋಪಿಯು ಪರೋಕ್ಷವಾಗಿ ಬಚಾವಾಗಲು ಇದು ನೆರವಾಗುವ ರೀತಿಯಲ್ಲವೇ? ಎಸಿಬಿಯ ಗುರಿ ಏನು? ಆರೋಪ ಪಟ್ಟಿ ಸಲ್ಲಿಸಿದ ಬಳಿಕವೂ, ಎಫ್ಎಸ್ಎಲ್ ವರದಿ ಸಲ್ಲಿಸಬಹುದಲ್ಲವೇ? ಎಸಿಬಿ ರಚಿಸಿರುವ ಉದ್ದೇಶವೇನು? ಭ್ರಷ್ಟಚಾರ ನಿಯಂತ್ರಣ ಮಾಡಲೋ? ಅಥವಾ ಭ್ರಷ್ಟಾಚಾರ ಎಸಗುವವರಿಗೆ ಬೆಂಬಲ ನೀಡಲೋ? ನಿಮಗೆ ನಾಚಿಕೆಯಾಗಬೇಕು. ಹೌದಲ್ಲವೇ?" ಎಂದರು.
ಅಂತಿಮವಾಗಿ ಪೀಠವು "60 ದಿನಗಳಾದರೂ ಎಸಿಬಿ ತನಿಖಾಧಿಕಾರಿ ಏಕೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸುತ್ತೇನೆ" ಎಂದು ಹೇಳಿತು.
ಪ್ರಕರಣ ಸಂಜೆ ವಿಚಾರಣೆಗೆ ಬಂದಾಗ, ವಕೀಲ ನಾಗೇಶ್ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಡೀಫಾಲ್ಟ್ ಜಾಮೀನು ಮಂಜೂರು ಮಾಡಿದೆ. ಹೀಗಾಗಿ, ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ಕೋರಿದರು. ಇದಕ್ಕೆ ನ್ಯಾಯಾಲಯ ಅನುಮತಿಸಿತು.
ವಕೀಲರಿಗೆ ಎಚ್ಚರಿಕೆ:
ಈ ಮಧ್ಯೆ, ನ್ಯಾ.ಹೆಚ್.ಪಿ.ಸಂದೇಶ್ ರವರ ಪೀಠ ತಪ್ಪಿಸಲು ಯತ್ನಿಸಿದ್ದಕ್ಕಾಗಿ ವಕಾಲತ್ ನಲ್ಲಿ ನ್ಯಾ.ಹೆಚ್.ಪಿ.ಸಂದೇಶ್ ವಕೀಲರಾಗಿದ್ದ ಕಚೇರಿ ಹೆಸರು ಉಲ್ಲೇಖಿಸಿದ್ದು, ಪೀಠ ತಪ್ಪಿಸಲು ಜೆಪಿ ಅಸೋಸಿಯೇಟ್ಸ್ ಹೆಸರಿನಲ್ಲಿ ವಕಾಲತ್ ಹಾಕಿದ್ದಕ್ಕೆ ಪಿ.ಎಸ್. ಮಹೇಶ್ ಪರ ವಕೀಲರಿಗೆ ಹೈಕೋರ್ಟ್ ಎಚ್ಚರಿಕೆ ನೀಡಿತು.
"ದುಡ್ಡು ಬರುತ್ತೆ ಹೋಗುತ್ತೆ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ, ನ್ಯಾಯಾಂಗಕ್ಕೆ ನಿಷ್ಟರಾಗಿ ಕೆಲಸ ಮಾಡಬೇಕು.ಇದು ಕೋರ್ಟ್ ಅನ್ನೇ ವಂಚಿಸುವ ಪ್ರಯತ್ನಕ್ಕಾಗಿ ಕ್ರಿಮಿನಲ್ ಕೇಸ್ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು.ಆದರೆ ವಕೀಲರು ಬೇಷರತ್ ಕ್ಷಮೆ ಕೇಳಿದ್ದಕ್ಕೆ ಬಿಟ್ಟಿದ್ದೇನೆ. ಮುಂದೆ ಇಂತಹ ಕೆಲಸ ಮಾಡಬೇಡಿ'' ಎಂದರು.
ಪ್ರಕರಣದ ಹಿನ್ನೆಲೆ:
ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದ ಮಹೇಶ್ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್ ಕುಮಾರ್ ಅಲಿಯಾಸ್ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಮಹೇಶ್ ಮತ್ತು ಚಂದ್ರು ಬಂಧನವಾಗಿ ಇಂದಿಗೆ ಸರಿಯಾಗಿ ಎರಡು ತಿಂಗಳಾಗಿದೆ. ಕಾನೂನಿನ ಅನ್ವಯ ಈ ವೇಳೆಗಾಗಲೇ ಎಸಿಬಿಯು ಆರೋಪ ಪಟ್ಟಿ ಸಲ್ಲಿಸಬೇಕಿತ್ತು.












Click it and Unblock the Notifications