ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಪಿ.ಬಿ.ವರ್ಲೇ ಪ್ರಮಾಣವಚನ ಸ್ವೀಕಾರ
ಬೆಂಗಳೂರು, ಅ.15. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಬಿ.ವರ್ಲೇ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಗಾಜಿನಮನೆಯಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪದವಿಯ ಅಧಿಕಾರ ಪ್ರಮಾಣವಚನವನ್ನು ಬೋಧಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಗೌರವಾನ್ವಿತ ಪ್ರಸನ್ನ ಬಾಲಚಂದ್ರ ವರ್ಲೇ ಅವರು ಪದವಿಯ ಅಧಿಕಾರ ಪ್ರಮಾಣವಚನವನ್ನು ಸ್ವೀಕರಿಸಿದರು. ಇದರಿಂದಾಗಿ ಕಳೆದ ಜು.2ರಿಂದ ಖಾಲಿ ಇದ್ದ ಸಿಜೆ ಹುದ್ದೆ ಭರ್ತಿಯಾದಂತಾಗಿದೆ.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು, ಕುಟುಂಬ ವರ್ಗದವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಮಾರಂಭದ ಸ್ವಾಗತವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಂದಿತಾ ಶರ್ಮಾ ಅವರು ನೆರವೇರಿಸಿದರು.
ಸಿಜೆ ಹಿನ್ನೆಲೆ:
ನ್ಯಾ.ಪಿ.ಬಿ. ವರ್ಲೇ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ1962ರ ಜೂ.23ರಂದು ಜನಿಸಿದ ಪ್ರಸನ್ನ ಬಿ.ವರ್ಲೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಕಲಾ ಮತ್ತು ಕಾನೂನು ಪದವಿ ಪಡೆದಿದ್ದಾರೆ.
1985ರ ಆ.12ರಂದು ವಕೀಲಿಕೆ ಆರಂಭಿಸಿದ ಅವರು ವಕೀಲ ಎಸ್.ಎಲ್. ಲೋಯಾ ಕಚೇರಿಗೆ ಸೇರಿ ಸಿವಿಲ್ ಮತ್ತು ಕ್ರಿಮಿನಲ್ ಕೇಸ್‌ಗಳನ್ನು ನಿರ್ವಹಿಸಿದರು. 1990ರಿಂದ 1992ವರೆಗೆ ಔರಂಗಾಬಾದ್‌ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿಉಪನ್ಯಾಸಕರಾಗಿದ್ದರು. ಔರಂಗಾಬಾದ್ ಹೈಕೋರ್ಟ್ ಪೀಠದಲ್ಲಿಸಹಾಯಕ ಸರ್ಕಾರಿ ಪ್ಲೀಡರ್ ಹಾಗೂ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು, ಕೇಂದ್ರ ಸರ್ಕಾರದ ಪರ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. 2008ರ ಜು.18ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಪ್ರಸನ್ನ ಬಿ. ವರ್ಲೇ ಕಳೆದ 14 ವರ್ಷಗಳಿಂದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಮಹತ್ವದ ತೀರ್ಪುಗಳನ್ನೂ ಸಹ ನೀಡಿದ್ದಾರೆ












Click it and Unblock the Notifications