ಜಯಾ ಬಂಧ ಮುಕ್ತ ಮಾಡಿದ ನ್ಯಾಯಮೂರ್ತಿ ಯಾರು?
ಬೆಂಗಳೂರು, ಮೇ 12: 18 ವರ್ಷಗಳ ಕಾಲ ನಡೆದುಕೊಂಡು ಬಂದ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಸೋಮವಾರ ಎರಡೇ ನಿಮಿಷದಲ್ಲಿ ಮುಗಿದುಹೋಯಿತು. ವಿಶೇಷ ನ್ಯಾಯಾಲಯದ ತೀರ್ಮಾನ ವಜಾ ಮಾಡಿದ ಹೈಕೋರ್ಟ್ ಜಯಲಲಿತಾ ನಿರ್ದೋಷಿ ಎಂದು ಘೊಷಣೆ ಮಾಡಿತು.
ನ್ಯಾಯಮೂರ್ತಿ ಚಿಕ್ಕ ರಾಚಪ್ಪ ಕುಮಾರಸ್ವಾಮಿ ತೀರ್ಮಾನದ ಪ್ರತಿ ಓದುವ ಮೂಲಕ ಜಯಲಿತಾ ನಿರ್ದೋಷಿ ಎಂದು ಘೋಷಣೆ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ತೀರ್ಪಿನ ವಿರುದ್ಧ ಅಣಕದ ಮಾತುಗಳು ಕೇಳಿ ಬಂದವು. ಹಾಗಾದರೆ ಜಯಲಲಿತಾ ಅವರನ್ನು ಬಂಧ ಮುಕ್ತ ಮಾಡಿ ರಾಜಕೀಯ ಪುನರ್ ಜನ್ಮ ನೀಡಿದ ನ್ಯಾಯಾಧೀಶರ ಬಗ್ಗೆ ತಿಳಿದುಕೊಳ್ಳಲೇಬೇಕು.[ಜಯಾ, ಸಲ್ಮಾನ್ ಖುಲಾಸೆ: ದಾವೂದ್ ಇಬ್ರಾಹಿಂ ಘರ್ ವಾಪ್ಸಿ!]

25-08-1953 ರಂದು ಜನಿಸಿದ ಕುಮಾರಸ್ವಾಮಿ 11-03-1983 ರಿಂದ ವಕೀಲ ವೃತ್ತಿ ಆರಂಭಿಸಿದರು. ಸಿವಿಲ್, ಕಾರ್ಮಿಕ ಮತ್ತು ಅಪರಾಧ ವಿಭಾಗಳಲ್ಲಿ ವಕೀಲರಾಗಿ ಅನೇಕ ವರ್ಷ ಕಾರ್ಯನಿರ್ವಹಿಸಿದರು. ಬೆಂಗಳೂರಿನ ನ್ಯಾಯಾಲಯಗಳಲ್ಲಿ ವಕೀಲರಾಗಿ ಕೆಲಸ ಮಾಡಿದ ನಂತರ ಜಿಲ್ಲಾ ಸತ್ರ ನ್ಯಾಯಾಧೀಶರಾಗಿಯೂ ಕಾರ್ಯನಿರ್ವಹಿಸಿದ್ದರು.['ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ']
07-03-2005 ರಂದು ಹೈ ಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ನಂತರ 01-03-2007 ರಂದು ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇದೀಗ ಜಯಲಲಿತಾ ಪ್ರಕರಣದಲ್ಲಿ ಮಹತ್ವದ ತೀರ್ಮಾನ ನೀಡಿದ್ದು ಚರ್ಚೆ ಹುಟ್ಟುಹಾಕಿದ್ದಾರೆ.
ಎಕ್ಸ್ ಪ್ರೆಸ್ ಕುಮಾರಸ್ವಾಮಿ
ನ್ಯಾಯಮೂರ್ತಿಯಾದ ಎಂಟು ಎಂಟು ವರ್ಷಗಳಲ್ಲಿ ಕುಮಾರಸ್ವಾಮಿ 500ಕ್ಕೂ ಹೆಚ್ಚು ಆದೇಶ ನೀಡಿದ್ದಾರೆ. ಬ್ಯಾಂಕಿಂಗ್ ಹಾಗೂ ಚೆಕ್ ಬೌನ್ಸ್ ಕೇಸುಗಳನ್ನು ಒಂದೆರಡು ತಿಂಗಳಿನಲ್ಲಿ ಮುಗಿಸುವ ಇವರಿಗೆ 'ಎಕ್ಸ್ ಪ್ರೆಸ್ ಜಡ್ಜ್' ಎಂದೇ ಕರೆಯಲಾಗುತ್ತದೆ.
ಜಯಲಲಿತಾ ಪ್ರಕರಣವನ್ನು ಜನವರಿ 1ಕ್ಕೆ ಕೈಗೆತ್ತಿಕೊಂಡಿದ್ದರು. ಜನವರಿ 5ರಂದು ಮೊದಲ ವಿಚಾರಣೆ ನಡೆಸಿ ನಂತರ 41 ದಿನಗಳ ಕಾಲ ಸತತ ವಿಚಾರಣೆ ನಡೆಸಿದ್ದರು. ಮಾರ್ಚ್ 11ಕ್ಕೆ ಆದೇಶ ಕಾಯ್ದಿರಿಸಿ ಮೇ 11ರ ಬೆಳಿಗ್ಗೆ ವರೆಗೂ ತೀರ್ಪು ಬರೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 919 ಪುಟಗಳ ಈ ಬೃಹತ್ ಆದೇಶ 10 ಸಂಪುಟಗಳನ್ನು ಹೊಂದಿದ್ದು ಮುಖ್ಯ ಭಾಗವನ್ನು ಸೋಮವಾರ ಓದಿ ಹೇಳಿದ್ದಾರೆ.
ಪ್ರಕರಣದ ದಾಖಲೆ ಕಾಪಾಡಲು ಮತ್ತು ಸಹಾಯಕ್ಕೆ ಲೆಕ್ಕಪರಿಶೋಧಕರ ತಂಡವೊಂದನ್ನು ಕುಮಾರಸ್ವಾಮಿ ರಚಿಸಿಕೊಂಡಿದ್ದರು. ಇವರು ನ್ಯಾಯಮೂರ್ತಿಗಳ ಕೊಠಡಿಯೊಳಗೆ ಪ್ರವೇಶಿಸುವಾಗ ಯಾವಿದೇ ಎಲೆಕ್ಟ್ರಾನಿಕ್ ವಸ್ತು, ಸೆಲ್‌ಫೋನ್, ಬ್ಯಾಗ್ ಪೇಪರ್, ಪೆನ್ನು ತರಬಾರದು ಎಂದು ನಿಯಮ ಮಾಡಲಾಗಿತ್ತು. ಅಲ್ಲದೇ ಉಪಯೋಗವಾದ ಹಾಳೆಗಳನ್ನು ಲೆಕ್ಕಕ್ಕೆ ಇಡಲಾಗುತ್ತಿತ್ತು.












Click it and Unblock the Notifications