ಗೌರಿ ಲಂಕೇಶ್ ಹತ್ಯೆ ಕೇಸ್: ಸೆಪ್ಟೆಂಬರ್ 14ಕ್ಕೆ ಮುಂದಿನ ವಿಚಾರಣೆ
ಬೆಂಗಳೂರು, ಸೆಪ್ಟೆಂಬರ್ 5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 14ಕ್ಕೆ ಮುಂದೂಡಿಕೆ ಮಾಡಿದೆ. ಈ ಹತ್ಯೆ ನಡೆದು ಐದು ವರ್ಷಗಳ ನಂತರದಲ್ಲಿ ಸೋಮವಾರ ಈ ಪ್ರಕರಣದ ವಿಚಾರಣೆಯನ್ನು ನಡೆಸಬೇಕಾಗಿತ್ತು.
ಕರ್ನಾಟಕದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಇಂಥ ಪ್ರಕರಣಗಳನ್ನು ಆಲಿಸುವ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶರ ಸಮ್ಮುಖದಲ್ಲಿ ಸೋಮವಾರ ಈ ಪ್ರಕರಣವು ವಿಚಾರಣೆಗೆ ಬರಬೇಕಾಗಿತ್ತು.
ಕೆಸಿಓಸಿಎ ಕೋರ್ಟಿನ ನ್ಯಾಯಾಧೀಶರು ರಜೆಯಲ್ಲಿದ್ದು, ಸೆಪ್ಟೆಂಬರ್ 12ರಂದು ಕರ್ತವ್ಯಕ್ಕೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆ ಸೆಪ್ಟೆಂಬರ್ 14ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಈ ವರ್ಷದ ಜುಲೈನಿಂದ ಪ್ರತಿ ತಿಂಗಳಿನಲ್ಲಿ ಒಂದು ವಾರ ಪ್ರಕರಣದ ವಿಚಾರಣೆಯನ್ನು ನಡೆಸಲಾಗುತ್ತಿದೆ.

ಐದು ವರ್ಷಗಳ ನಂತರ ವಿಚಾರಣೆಗೆ ಮುಹೂರ್ತ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಐದು ವರ್ಷಗಳ ನಂತರದಲ್ಲಿ ಪ್ರಕರಣದ ಕುರಿತು ವಿಚಾರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿತ್ತು. ಇದರ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಮೊದಲ ಸಾಕ್ಷಿಯಾಗಿರುವ ಕವಿತಾ ಲಂಕೇಶ್ ಅವರ ಸಾಕ್ಷ್ಯವನ್ನು ಬೆಂಗಳೂರು ನಗರ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಮೃತ್ಯುಂಜಯ ಜೋಶಿ ದಾಖಲಿಸಿದರು. ಬಳಿಕ ಅವರು, ಆರೋಪಿಗಳ ವಿಚಾರಣೆಯನ್ನು ಇದೇ ಜುಲೈ 4ರಿಂದ 8ರವರೆಗೆ ಪ್ರತಿದಿನ ನಡೆಸಲಾಗುವುದು ಎಂದು ಆದೇಶಿಸಿದರು.

ಜುಲೈ 4ಕ್ಕೆ ವಿಚಾರಣೆ ಎಂದಿದ್ದೇಕೆ ಕೋರ್ಟ್?
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆ ಗೌರಿ ಲಂಕೇಶ್ ಸಹೋದರಿ ಕವಿತಾ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ದಾಖಲಿಸಿದ್ದರು. ಅವರ ಜೊತೆಗೆ ವಿಚಾರಣೆ ವೇಳೆ 18 ಆರೋಪಿಗಳ ಪೈಕಿ 11 ಮಂದಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಉಳಿದ ಏಳು ಮಂದಿ ಆರೋಪಿಗಳು ಗೈರು ಹಾಜರಾಗಿದ್ದರು. ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಮತ್ತು ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ ಕೊಲೆಯಲ್ಲೂ ಈ ಏಳು ಜನ ಆರೋಪಿಗಳಾಗಿದ್ದು, ಹೀಗಾಗಿ ಮುಂಬೈನ ಆರ್ಥರ್ ಜೈಲಿನಲ್ಲಿ ಇರಿಸಿರುವ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಯಿತು.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 527 ಸಾಕ್ಷಿಗಳು
ಗೌರಿ ಲಂಕೇಶ್‌ಗೆ ಗುಂಡು ಹಾರಿಸಿ ಹತ್ಯೆ ಮಾಡಲಾದ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಪ್ರಮುಖ ರೂವಾರಿ ಅಮೋಲ್ ಕಾಳೆ ಎನ್ನಲಾಗಿದೆ. ಪರಶುರಾಮ್ ವಾಗ್ಮೋರೆ ಗುಂಡು ಹಾರಿಸಿದ್ದರೆ, ಬೈಕ್ ಚಲಾಯಿಸಿದ ಆರೋಪ ಗಣೇಶ್ ಮಿಸ್ಕಿನ್ ಎಂಬ ಆರೋಪಿಯ ಮೇಲಿದೆ. ಎಸ್‌ಐಟಿಯು 18 ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ 5800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 527ಸಾಕ್ಷಿಗಳಿದ್ದಾರೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದಿದ್ದು ಯಾವಾಗ?
ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸದ ಹೊರಗಡೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಹತ್ಯೆ ಮಾಡಲಾಗಿತ್ತು. ಗೌರಿ ಲಂಕೇಶ್ ಕೊಲೆಗೂ ಕನ್ನಡದ ಮತ್ತೊಬ್ಬ ಬರಹಗಾರ, ಸಂಶೋಧಕ ಎಂಎಂ ಕಲ್ಬುರ್ಗಿ ಹತ್ಯೆಗೂ ಲಿಂಕ್ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಗೋವಿಂದ್ ಪನ್ಸಾರೆ ಮತ್ತು ನರೇಂದ್ರ ದಾಭೊಲ್ಕರ್ ಅವರ ಕೊಲೆಗೂ ನಂಟು ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.












Click it and Unblock the Notifications