ಜೆಡಿಎಸ್ ಸೇರಿದ ಚಾಮರಾಜಪೇಟೆ ಕಾಂಗ್ರೆಸ್ ಮುಖಂಡರು: ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ
ಬೆಂಗಳೂರು, ಡಿಸೆಂಬರ್ 11: ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಜಮೀರ್ ಅಹಮ್ಮದ್ ಖಾನ್ ಅವರ ಚಾಮರಾಪೇಟೆಯಲ್ಲಿಯೇ ಮೊದಲು ವಿಜಯ ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣದಲ್ಲಿ ಒಂದು ಪಕ್ಷ ತೊರೆದು ಮತ್ತೊಂದು ಪಕ್ಷ ಸೇರುವ ಪರಿಪಾಠ ಮುನ್ನೆಲೆಗೆ ಬಂದಿದೆ. ಭಾನುವಾರ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡರು. ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಎಚ್.ಡಿ ಕುಮಾರಸ್ವಾಮಿ ಮಾತನಾಡಿದರು.

ಪಕ್ಷ ಒಪ್ಪಿದರೆ ವರುಣಾದಿಂದ ಸ್ಪರ್ಧೆ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ
ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು, ಮಾಜಿ ಉಪಮೇಯರ್ ಶ್ರೀರಾಮೇಗೌಡ, ಬಿಬಿಎಂಪಿ ಮಾಜಿ ಸದಸ್ಯೆ ಗೌರಮ್ಮ ಹಾಗೂ ಮುಖಂಡರಾದ ಶೇಖರ್, ದೊರೆ ಸೇರಿದಂತೆ ಹಲವರು ಜೆಡಿಎಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅಡಿಪಾಯ ಹಾಕಿದವರು ಯಾರು?, ಈ ಹಿಂದೆ ಆಕ್ಷೇತ್ರ ಹೇಗಿತ್ತು? ಎಂಬುದು ಇತಿಹಾಸ ಇದೆ. ಈಗ ಮತ್ತೊಮ್ಮೆ ಜೆಡಿಎಸ್ ಅಲ್ಲಿ ಗೆಲ್ಲಬೇಕು. ಹಣ ಹಂಚುವುದು ದೊಡ್ಡದಲ್ಲ. ಆದರೆ ಆ ಹಣ ಹೇಗೆ ಸಂಗ್ರಹ ಆಗಿದೆ ಎಂದು ಗಮನಿಸಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರವಾಗಲಿದೆ ಎಂದು ಅವರು ಹೇಳಿದರು.
ಇತ್ತೀಚಿನ ಗುಜರಾತ್ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆ ಗೆಲ್ಲಲ್ಲು ಏನೇನು ತಂತ್ರ ಹೆಣೆಯುತ್ತಿದ್ದಾರೆ ಎಂಬುದರ ಬಗ್ಗೆ ಕೇಳಿ ಬರುತ್ತಿವೆ. ಆದರೆ ಅವರೆಲ್ಲ ಜೆಡಿಎಸ್ ಪಕ್ಷ ಇದೆ ಎನ್ನುವುದನ್ನೇ ಮರೆತಿದ್ದಾರೆ. ಅದಕ್ಕಾಗಿ ನನ್ನಲ್ಲಿ ಬೇಸರ ಇಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ರಾಜ್ಯದಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಬಿಜೆಪಿ, ಕಾಂಗ್ರೆಸ್ ಚುನಾವಣೆ ಸಂಬಂಧ ಆಂತರಿಕ ಸಮೀಕ್ಷೆ ನಡೆಸುತ್ತಿವೆ. ಪ್ರತಿ ಎರಡು ತಿಂಗಳಿಗೆ ಒಂದು ಕಾರ್ಯತಂತ್ರ ಮಾಡುತ್ತಿವೆ. ಆದರೆ ಒಂದಂತೂ ಸತ್ಯ. ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲುವುದರಲ್ಲಿ ಅನುಮಾನವಿಲ್ಲ. 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್ ಬಿಟ್ಟು ನಮ್ಮ ಪಕ್ಷ ಸೇರಿದ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡುತ್ತೇವೆ. ಶಿಕಾರಿಪುರ, ಅಥಣಿ ಮಾಜಿ ಶಾಸಕರು ಜೆಡಿಎಸ್ ಸೇರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು 123 ಸ್ಥಾನವನ್ನು ಗೆಲ್ಲಬೇಕು. ಗೆಲ್ಲಲು ನಾವು ಹೋರಾಟ ಮಾಡಬೇಕು. ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು, ಪ್ರಮಾಣವಚನ ಕಾರ್ಯಕ್ರಮವನ್ನು ದೇವೇಗೌಡರು ನೋಡಬೇಕು.
ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ವಿಧಾನಸೌಧದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಸಿ.ಎಂ ಇಬ್ರಾಹಿಂ ತಿಳಿಸಿದರು.
ಕಳೆದ 20 ವರ್ಷಗಳಿಂದ ಚಾಮರಾಜಪೇಟೆ ಅಭಿವೃದ್ಧಿ ಆಗಿಲ್ಲ. ಅದಕ್ಕೆ ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದೇವೆ. 2013, 2018ರಲ್ಲಿ ಜಮೀರ್ ಅಹಮ್ಮದ್ ಖಾನ್ ಜೊತೆ ನಿಂತಿದ್ದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹಾಗಾಗಿ ಇಂದು ಜೆಡಿಎಸ್ ಸೇರ್ಪಡೆ ಆಗಿದ್ದೇನೆ. ಕಾರ್ಯಕರ್ತನಾಗಿ ನಾನು ನನ್ನ ಕೆಲಸ ಮಾಡುತ್ತೇನೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಜೆಡಿಎಸ್‌ಗೆ ಸೇರ್ಪಡೆಯಾದ ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು ಹೇಳಿದರು.












Click it and Unblock the Notifications