ಅಮಿತ್ ಶಾ ಕಾಲಿಗೆ ಬಿದ್ದ ರಾಮದಾಸ್: ಬಿಜೆಪಿ ಸೋಲಿಗೆ ಕ್ಷಣಗಣನೆ ಆರಂಭವಾಗಿದೆ ಎಂದ ಜೆಡಿಎಸ್
ಕೃಷ್ಣ ರಾಜೇಂದ್ರ ಕ್ಷೇತ್ರದ ಹಾಲಿ ಶಾಸಕ ರಾಮದಾಸ್ ಅಮಿತ್ ಶಾ ಕಾಲಿಗೆ ಬಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿದೆ. ಅಮಿತ್ ಶಾಗೆ 58 ವರ್ಷವಾದರೆ ಶಾಸಕ ರಾಮದಾಸ್‌ಗೆ 63 ವರ್ಷ. ತಮಗಿಂತ 5 ವರ್ಷ ಕಿರಿಯ ವ್ಯಕ್ತಿ ಅಮಿತ್ ಶಾ ಕಾಲಿಗೆ ಬಿದ್ದಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಜೆಡಿಎಸ್ ಕೂಡ ಟ್ವೀಟ್ ಮಾಡಿದ್ದು, ಬಿಜೆಪಿಯನ್ನು ಟೀಕಿಸಿದೆ. "ರಾಜ್ಯ ಬಿಜೆಪಿ ಮುಖಂಡರೆಲ್ಲ ಎಷ್ಟರ ಮಟ್ಟಿಗೆ ಗುಲಾಮರಾಗಿದ್ದಾರೆ ಎಂಬುದಕ್ಕೆ ಈ ಪಟ ಸಾಕ್ಷಿ ನುಡಿಯುತ್ತಿದೆ. ನಮಸ್ಕಾರ ಮಾಡಿ ಗೌರವ ಸೂಚಿಸುವುದು ನಮ್ಮ ಸಂಸ್ಕೃತಿ. ಆದರೆ, ವಯಸ್ಸಿನಲ್ಲಿ ಹಿರಿಯರಾದವರು ತಮಗಿಂತ ಕಿರಿಯರ ಕಾಲಿಗೆ ಬೀಳುವುದಿಲ್ಲ. ಟಿಕೆಟ್ ತಪ್ಪಿರುವ ಶಾಸಕ ರಾಮದಾಸ್ ಅವರನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ." ಎಂದು ಹೇಳಿದೆ.

ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲು ವಿಮಾನ ನಿಲ್ದಾಣಕ್ಕೆ ಬಂದ ಅಮಿತ್ ಶಾರನ್ನು ಕೃಷ್ಣ ರಾಜೇಂದ್ರ ಕ್ಷೇತ್ರದ ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ಆತ್ಮೀಯವಾಗಿ ಸ್ವಾಗತಿಸಿದ್ದರು. ಈ ವೇಳೆ ಅಮಿತ್ ಶಾ ಕಾಲಿಗೆ ರಾಮದಾಸ್ ನಮಸ್ಕರಿಸಿದ್ದಕ್ಕೆ ಜೆಡಿಎಸ್ ವ್ಯಂಗ್ಯವಾಡಿದೆ.
ಅಮಿತ್ ಶಾ ಕುತಂತ್ರಿ ಎಂದ ಜೆಡಿಎಸ್
ಚುನಾವಣಾ ಚಾಣಕ್ಯ ಎಂಬ ಮುಖವಾಡ ಧರಿಸಿರುವ ಕುತಂತ್ರಿ ಅಮಿತ್ ಶಾ ಅವರ ವಯಸ್ಸು 58. ಅದೇ ಕಾಲಿಗೆ ಎರಗಿ ಗುಲಾಮಿ ಮನಸ್ಥಿತಿ ತೋರಿರುವ ರಾಮದಾಸ್ ಅವರ ಅಧಿಕೃತ ವಯಸ್ಸು 63. ವಯಸ್ಸಿನ ಅಂತರ ಇಷ್ಟಿದ್ದಾಗಲೂ ಹೈಕಮಾಂಡ್ ಕಾಲಿಗೆ ಎರಗುವ ಸ್ಥಿತಿ ರಾಜ್ಯ ಬಿಜೆಪಿ ನಾಯಕರಿಗೆ ಬಂದಿರುವುದು ಶೋಚನೀಯ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
"ಇಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ, ದೆಹಲಿಯಿಂದಲೇ ಆಡಳಿತ ನಡೆಸುತ್ತಾರೆ ಎಂದು ರಾಜ್ಯದ ಜನ ಮಾತನಾಡುತ್ತಿದ್ದಾರೆ. ಇವರ ಈ ನಡವಳಿಕೆ, ಅತಿಯಾದ ಹೈಕಮಾಂಡ್ ಓಲೈಕೆ ಜನರಿಗೆ ಅಸಹ್ಯ ತರಿಸಿದೆ. ಗೌರವ, ಗುಲಾಮಗಿರಿ, ಕನ್ನಡಿಗರ ಸ್ವಾಭಿಮಾನ ಇವೆಲ್ಲದರ ವ್ಯತ್ಯಾಸವೇ ಗೊತ್ತಿಲ್ಲದಷ್ಟು ಕುಸಿದಿರುವ ರಾಜ್ಯ ಬಿಜೆಪಿಗೆ ಸೋಲಿನ ಕ್ಷಣಗಣನೆ ಆರಂಭವಾಗಿದೆ." ಎಂದು ಜೆಡಿಎಸ್ ಹೇಳಿದೆ.
ಹಾಲಿ ಶಾಸಕ ರಾಮದಾಸ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿದೆ. ಟಿಕೆಟ್ ಸಿಗದ ಕಾರಣಕ್ಕೆ ಹಲವು ಮುಖಂಡರು ಬೇರೆ ಪಕ್ಷಗಳತ್ತ ಮುಖ ಮಾಡಿದರೂ, ರಾಮದಾಸ್ ಮಾತ್ರ ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದರು. ರಾಮದಾಸ್ ಅವರ ಪಕ್ಷ ನಿಷ್ಠೆಗೆ ಅಮಿತ್ ಶಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಕೈ ತಪ್ಪಿದರೂ ಅವರಿಗೆ ಪ್ರಮುಖ ಸ್ಥಾನಮಾನ ನೀಡುವ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications