15 ಕ್ಷೇತ್ರಗಳ ಮೇಲೆ ಮಾತ್ರ ಜೆಡಿಎಸ್ ಕಣ್ಣು!
ಬೆಂಗಳೂರು, ಫೆ.28 : ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಮಾರ್ಚ್ 15ರೊಳಗೆ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 15 ಕ್ಷೇತ್ರಗಳಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಪ್ರಸಕ್ತ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಪಕ್ಷದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬುಧವಾರ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಮಾರ್ಚ್ 15ರೊಳಗೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. [ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ]

ಪಕ್ಷದ ಬಲಾಬಲಗಳೇನು ಎಂಬುದು ನಮಗೆ ತಿಳಿದಿದೆ. ಆದ್ದರಿಂದ 28 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಹೆಚ್ಚಿನ ಗಮನ ನೀಡಲಾಗುವುದು. ಪ್ರತಿ ಕ್ಷೇತ್ರದ ಬಗ್ಗೆ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾಗುತ್ತಿದ್ದು, ಅಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಆಲೋಚನೆ ಇದೆ. ಈ ಕುರಿತು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು. [ಸಿಎಂ ಸಿದ್ದು ತವರಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ]
ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿತ್ತು. ಇದೀಗ ಕಾಂಗ್ರೆಸ್ ಆ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದರ ಆಧಾರದ ಮೇಲೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ಬೆಂಗಳೂರು ಉತ್ತರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಘೋಷಣೆಯಾದ ನಂತರ, ಜೆಡಿಎಸ್ ಅಭ್ಯರ್ಥಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. [ಜೆಡಿಎಸ್ ಸಂಭಾವ್ಯ ಪಟ್ಟಿ]
ಕೋಲಾರ ಕ್ಷೇತ್ರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಸದ್ಯಕ್ಕೆ ಹಾಸನದಿಂದ ಎಚ್.ಡಿ.ದೇವೇಗೌಡ , ಉತ್ತರ ಕನ್ನಡದಿಂದ ಶಿವಾನಂದ ನಾಯ್ಕ ಹಾಗೂ ಚಾಮರಾಜನಗರ ದಿಂದ ಶಿವಣ್ಣ ಅವರ ಹೆಸರುಗಳು ಮಾತ್ರ ಅಂತಿಮಗೊಂಡಿವೆ ಎಂದು ಹೇಳಿದರು. [ಜೆಡಿಎಸ್ ಸೇರಿದ ಎಚ್.ಸಿದ್ಧಯ್ಯ]












Click it and Unblock the Notifications