ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಗಾಗಿ ಶೆಡ್ ನಿರ್ಮಾಣ
ಬೆಂಗಳೂರು, ಜ.21 : ಸುಪ್ರೀಂಕೋರ್ಟ್ ಆದೇಶದಂತೆ ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬಿಟ್ಟು ಕೊಡಲಿರುವ ಜೆಡಿಎಸ್ ಪಕ್ಷದ ಕಚೇರಿ ಹಿಂಭಾಗ ಶೆಡ್ ನಿರ್ಮಿಸಿ ಹೊಸ ಕಚೇರಿ ತೆರೆಯಲು ಹೊರಟಿದೆ. ಆದರೆ, ಶೆಡ್ ನಿರ್ಮಿಸುವ ಯತ್ನವೂ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಚೇರಿಗೆ ಮಂಗಳವಾರ ಆಗಮಿಸಿದ್ದ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು, ಕಚೇರಿ ಹಿಂದಿನ ಖಾಲಿ ಜಾಗವನ್ನು ಜೆಸಿಬಿ ಯಂತ್ರದಿಂದ ಸಮತಟ್ಟು ಮಾಡಿಸಿ, ಶೆಡ್ ನಿರ್ಮಿಸುವ ಕಾಮಗಾರಿಗೆ ಚಾಲನೆ ಕೊಟ್ಟರು. [ಜೆಡಿಎಸ್ ಕಾನೂನು ಹೋರಾಟ ಅಂತ್ಯ]

ಇಲ್ಲೂ ವಿವಾದ : ಜೆಡಿಎಸ್ ಕಚೇರಿ ಹಿಂಭಾಗವಿರುವ ಸುಮಾರು 19 ಸಾವಿರ ಚದರಡಿಯ ಜಾಗವು ಶಿವಮೊಗ್ಗ ತಾಲೂಕು ಹಾರನಹಳ್ಳಿಯ ರಾಮಲಿಂಗೇಶ್ವರ ಮಠಕ್ಕೆ ಸೇರಿದ್ದೆಂಬ ತಕರಾರು ಇದ್ದು, ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಆದ್ದರಿಂದ ಶೆಡ್ ನಿರ್ಮಿಸಬಾರದು ಎಂದು ಮಠದ ಪರ ವಕೀಲರು ಹೇಳಿದ್ದಾರೆ. [ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?]
ದೇವೇಗೌಡರು ಹೇಳುವುದೇನು : ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಮಾನ್ಯತೆ ಪಡೆದ ರಾಜಕೀಯ ಪಕ್ಷದ ಕಚೇರಿಯ ಕಟ್ಟಡಕ್ಕೆ ಸೂಕ್ತ ಜಾಗ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಬಿಬಿಎಂಪಿ ಮತ್ತು ಬಿಡಿಎಗೆ ಮನವಿ ಸಲ್ಲಿಸಿದರೂ ಸರ್ಕಾರ ಜಾಗ ನೀಡಿಲ್ಲ ಎಂದು ಆರೋಪಿಸಿದರು. [ಜೆಡಿಎಸ್ ಕಚೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು]

ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಸರ್ಕಾರ ಜಾಗವನ್ನು ನೀಡಿದೆ. ಮಾನ್ಯತೆ ಪಡೆದ ಜೆಡಿಎಸ್‌ಗೆ ಕಚೇರಿ ನೀಡುವಂತೆ ಕೋರಿದ್ದೇವೆ. ಕಚೇರಿ ಬಿಟ್ಟು ಕೊಟ್ಟು ಪಕ್ಷದ ಸಂಘಟನೆ ಮಾಡಲು ಜಾಗ ಹುಡುಕುವುದು ಅಸಾಧ್ಯ. ಆದ್ದರಿಂದ ಶೆಡ್ ನಿರ್ಮಿಸಲಾಗುತ್ತಿದೆ ಎಂದರು.
ತಡೆಯಾಜ್ಞೆ ಮುಂದುವರಿಕೆ : ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಿಂಭಾಗ ಜೆಡಿಎಸ್‌ಗೆ ಬಿಬಿಎಂಪಿ ಭೂಮಿ ನೀಡಿತ್ತು. ಆದರೆ, ಬಿಬಿಎಂಪಿ ಕೈಗೊಂಡಿದ್ದ ನಿರ್ಣಯಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಫೆ.3ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಈ ಭೂಮಿ ನಮಗೆ ಸೇರಿದ್ದು, ಇದನ್ನು ಜೆಡಿಎಸ್ ಪಕ್ಷಕ್ಕೆ ಬಿಬಿಎಂಪಿ ಹೇಗೆ ನೀಡಿದೆ ಎಂದು ಕೆ.ಜಿ.ಚಂದ್ರಶೇಖರ್ ಭಟ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ತಡೆಯಾಜ್ಞೆಯನ್ನು ವಿಸ್ತರಣೆ ಮಾಡಿದೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ಜೆಡಿಎಸ್ ತನ್ನ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ 2014ರ ಡಿ.31ರೊಳಗೆ ಬಿಟ್ಟುಕೊಡಬೇಕಿತ್ತು. ಈ ಆದೇಶವನ್ನು ಪುನರ್ ಪರಿಶೀಲಿಸುವಂತೆ ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಆದ್ದರಿಂದ ಜೆಡಿಎಸ್ ಕಚೇರಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಗಿದೆ.













Click it and Unblock the Notifications