KPSC: ಕಾಸಿಗಾಗಿ ಹುದ್ದೆ ಮಾರಿಕೊಳ್ಳುವ ಕೆಪಿಎಸ್‌ಸಿ ಕೊಳಕರನ್ನು ಕ್ಲೀನ್ ಮಾಡಿ: ಜೆಡಿಎಸ್
ಕೆಪಿಎಸ್‌ಸಿ ವಿಸರ್ಜನೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ಇದಕ್ಕೆ ಜೆಡಿಎಸ್ ಪಕ್ಷವು ಖಾರವಾಗಿ ತಿರುಗೇಟು ನೀಡಿದೆ. ಸಂವಿಧಾನದ ಪ್ರತಿಯನ್ನು ಕೈಯ್ಯಲ್ಲಿಟ್ಟುಕೊಂಡು ʼಶೋʼ ಮಾಡುವುದಲ್ಲ. ಅದನ್ನು ಓದಲೂ ಬೇಕು ಎಂದು ಜೆಡಿಎಸ್ ಕಿಡಿಕಾರಿದೆ. ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳುವುದು? ಕರ್ನಾಟಕ ಲೋಕಸೇವಾ ಆಯೋಗ ಉರುಫ್ ಕೆಪಿಎಸ್‌ಸಿಯನ್ನು ವಿಸರ್ಜನೆ ಮಾಡಬೇಕೆಂದು ಪ್ರಸ್ತಾವನೆ ನೀಡಿದ್ದೇವೆ ಎಂದು ಹೇಳಿದ್ದೀರಿ. ಅದನ್ನು ಹೇಗೆ ಮಾಡುತ್ತೀರಿ? ಎಂದು ಕೇಳಿದೆ.
ಹೋಗಲಿ. ಕೆಪಿಎಸ್‌ಸಿ ಹೇಗೆ ರಚನೆ ಆಗಿದೆ ಎಂಬ ಸಾಮಾನ್ಯ ತಿಳಿವಳಿಕೆಯಾದರೂ ನಿಮಗೆ ಇದೆಯೇ? ಅದು ಸಾಂವಿಧಾನಿಕ ಸಂಸ್ಥೆ. ಸಂವಿಧಾನದ ಅಡಿಯಲ್ಲಿ ರಚನೆ ಆಗಿರುವ ಸಂಸ್ಥೆ ಎನ್ನುವುದಾದರೂ ಗೊತ್ತಿದೆಯೇ? ಕೆಪಿಎಸ್‌ಸಿ ಅಧ್ಯಕ್ಷರಲ್ಲ, ಒಬ್ಬ ಸದಸ್ಯನನ್ನು ಮನೆಗೆ ಕಳಿಸಬೇಕಾದರೂ ರಾಷ್ಟ್ರಪತಿಗಳು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅವರಿಗೆ ವಾಗ್ದಂಡನೆ ವಿಧಿಸಲು ಬಹುಮತದ ಅಗತ್ಯವಿರುತ್ತದೆ. ಇಡೀ ಸಂಸ್ಥೆಗೆ ಸಾಂವಿಧಾನಿಕ ರಕ್ಷಣೆ ಇದೆ. ಹೀಗಿದ್ದ ಮೇಲೆ ನೀವೇನು ಮಾಡಲು ಸಾಧ್ಯ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಕೆಪಿಎಸ್‌ಸಿ ನೇಮಕ ಮಾಡಿಕೊಳ್ಳುತ್ತಿಲ್ಲ, ಅದು ಕೊಳೆತು ನಾರುತ್ತಿದೆ ಎಂದು ಹೇಳಿದ್ದೀರಿ. ಹಾಗಿದ್ದ ಮೇಲೆ ಅದಕ್ಕೆ ಕಾರಣರು ಯಾರು? ಅಲ್ಲಿ ಕೂತಿರುವ 16 ಮಂದಿಯನ್ನು ನೇಮಕ ಮಾಡಿದವರು ಯಾರು? ವಿಧಾನಸೌಧದ 3ನೇ ಮಹಡಿಯಲ್ಲಿ ಕೂತಿರುವ ನಿಮ್ಮ ಕಾಂಗ್ರೆಸ್ ಸರ್ಕಾರ ಅಲ್ಲವೇ? ಕೆಪಿಎಸ್‌ಸಿಯನ್ನ ಕೊಳಗೇರಿ ಮಾಡಿದವರೂ ನೀವೇ ಅಲ್ಲವೇ? ಹಾಗಿದ್ದ ಮೇಲೆ ಅದರ ಶುದ್ಧತೆ ಬಗ್ಗೆ ಮಾತನಾಡಲು ನೈತಿಕತೆ ಎಲ್ಲಿದೆ? ಎಂದು ಟೀಕಿಸಿದೆ.
ಮುಂದೆ ಎಲ್ಲವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಕೊಡುತ್ತೇವೆ ಎಂದು ಹೇಳಿದ್ದೀರಿ. ಹಾಗಿದ್ದ ಮೇಲೆ ನಾರುತ್ತಿರುವ ಕೆಪಿಎಸ್‌ಸಿ ಏತಕ್ಕೆ? ಕಪ್ಪ ಕೊಟ್ಟವರನ್ನು ಅಲ್ಲಿಗೆ ತಂದು ಕೂರಿಸಿದ್ದೀರಿ. ಹಾಗಿದ್ದ ಮೇಲೆ ಸಂಸ್ಥೆಯನ್ನು ಏಕೆ ನಿಂದಿಸುತ್ತೀರಿ? ನಿಮಗೆ ನಿಜಕ್ಕೂ ಕೆಪಿಎಸ್‌ಸಿಯನ್ನ ಕ್ಲೀನ್ ಮಾಡುವ ಉದ್ದೇಶವೇ ಇದ್ದರೆ, ಮೊದಲು ಅಲ್ಲಿನ ಕಾಸಿಗಾಗಿ ಹುದ್ದೆ ಮಾರಿಕೊಳ್ಳುವ ಕೊಳಕರಿಗೆ ಒಂದು ಗತಿ ಕಾಣಿಸಿ. ಅದು ಬಿಟ್ಟು ಬರೀ ಬಾಯಿ ಮಾತಿನಿಂದ ಏನೂ ಉಪಯೋಗವಿಲ್ಲ ಖರ್ಗೆ ಅವರೇ ಎಂದು ಜೆಡಿಎಸ್ ತಿರುಗೇಟು ನೀಡಿದೆ.
ಪ್ರಿಯಾಂಕ್ ಹೇಳಿದ್ದೇನು?
ಕೆಪಿಎಸ್‌ಸಿ ವಿರುದ್ಧ ಗರಂ ಆಗಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೆಪಿಎಸ್‌ಸಿ ಇರುವವರೆಗೆ ರಾಜ್ಯದ ಜನರಿಗೆ ಉದ್ಯೋಗ ಸಿಗೋದಿಲ್ಲ. ಒಂದು ವೇಳೆ ನನಗೆ ಅವಕಾಶ ಕೊಟ್ಟರೆ ಕೆಪಿಎಸ್‌ಸಿ ವಿಸರ್ಜಿಸಲೂ ಸಿದ್ಧ ಎಂದು ಹೇಳಿದ್ದರು. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ನೇಮಕಾತಿ ಹೊಣೆ ನೀಡಿದ್ದೆವು. ಆದರೆ ಕೆಇಎ ತನ್ನ ಕೆಲಸ ಮುಗಿಸಿದ್ದು, ಕೆಪಿಎಸ್‌ಸಿ ಇನ್ನೂ ತನ್ನ ಕೆಲಸ ಮಾಡಿಲ್ಲ. ಸಾಂವಿಧಾನಿಕ ಸಂಸ್ಥೆ ಎಂಬ ಕಾರಣಕ್ಕೆ ಅದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಕ್ಕೂ ಆಗ್ತಿಲ್ಲ ಎಂದಿದ್ದರು.












Click it and Unblock the Notifications