ಸೋಮವಾರ ಜೆಡಿಎಸ್ ಬಂಡಾಯ ಶಾಸಕರ ವಿಚಾರಣೆ
ಬೆಂಗಳೂರು, ಮಾರ್ಚ್ 18 : 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್ ಪಕ್ಷದ 7 ಬಂಡಾಯ ಶಾಸಕರ ವಿಚಾರಣೆ ಸೋಮವಾರ ನಡೆಯಲಿದೆ. ಎಲ್ಲಾ ಶಾಸಕರು ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿದ್ದಾರೆ.
ಗುರುವಾರ ಜೆಡಿಎಸ್ ಎರಡು ದಿನದಲ್ಲಿ ಬಂಡಾಯ ಶಾಸಕರ ಅರ್ಜಿ ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಿತ್ತು. ವಿಧಾನಸಭಾಧ್ಯಕ್ಷರ ಅರೆನ್ಯಾಯಿಕ ಪ್ರಾಧಿಕಾರದ ಮುಂದೆ ಹಾಜರಾಗಬೇಕು ಎಂದು ಶಾಸಕರಿಗೆ ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ಸೂಚನೆ ನೀಡಿದ್ದಾರೆ.
2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಮಾರ್ಚ್ 23ರಂದು ರಾಜ್ಯಸಭೆ ಚುನಾವಣೆ ನಿಗದಿಯಾಗಿದೆ. ಬಂಡಾಯ ಶಾಸಕರಿಗೆ ಮತದಾನ ಮಾಡಲು ಅವಕಾಶ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.

ಯಾವ-ಯಾವ ಶಾಸಕರು? : ರಮೇಶ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಚೆಲುವರಾಯಸ್ವಾಮಿ (ನಾಗಮಂಗಲ), ಇಕ್ಬಾಲ್ ಅನ್ಸಾರಿ (ಗಂಗಾವತಿ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ, ಬೆಂಗಳೂರು) ಶಾಸಕ ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ).
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
7 ಶಾಸಕರನ್ನು ಅವರ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಜೆಡಿಎಸ್ ಪಕ್ಷ ಮನವಿ ಮಾಡಿದೆ. ಶಾಸಕರ ಅನರ್ಹತೆ ಅತ್ಯಂತ ತುರ್ತಿನ ವಿಚಾರ, ಈ ಕುರಿತು ಅರ್ಜಿಯ ವಿಚಾರಣೆಯನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಪಕ್ಷ ಮನವಿ ಮಾಡಿದೆ.
ಸೋಮವಾರ ಬೆಳಗ್ಗೆ 11.30ಕ್ಕೆ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸ್ಪೀಕರ್ ಕಚೇರಿಯಲ್ಲಿ ಶಾಸಕರ ವಿಚಾರಣೆ ನಡೆಯಲಿದೆ. ಶಾಸಕರಿಗೆ ಮತದಾನದ ಹಕ್ಕು ಸಿಗಲಿದೆಯೇ? ಕಾದು ನೋಡಬೇಕು.












Click it and Unblock the Notifications