ಜೆಡಿಎಸ್‌ನ 8 ಶಾಸಕರ ಅಮಾನತು, ಮುಂದೇನು?
ಬೆಂಗಳೂರು, ಜೂನ್ 13 : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ 8 ಶಾಸಕರನ್ನು ಜೆಡಿಎಸ್ ಅಮಾನತು ಮಾಡಿದೆ. ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಅವಕಾಶವಿದೆ. ಈ ಭಿನ್ನಮತೀಯರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ನಿಯಮದಂತೆ ಅಮಾನತು ಮಾಡಿರುವ ಶಾಸಕರಿಗೆ ನೋಟಿಸ್ ನೀಡಿದ್ದು, ಎರಡು ವಾರದೊಳಗೆ ಉತ್ತರ ನೀಡಲು ಸೂಚಿಸಲಾಗಿದೆ. ಶಾಸಕರು ನೀಡುವ ಉತ್ತರವನ್ನು ಪರಿಶೀಲಿಸಲು ಶಿಸ್ತು ಸಮಿತಿಯನ್ನು ರಚನೆ ಮಾಡಲಾಗುತ್ತದೆ. [ಜೆಡಿಎಸ್ ಭಿನ್ನಮತ ಅಂತಿಮ ಘಟ್ಟಕ್ಕೆ, ಮುಂದೇನು?]

ಶಾಸಕರು ನೀಡಿದ ವಿವರಣೆಯನ್ನು ಪರಿಗಣಿಸಿದ ಬಳಿಕ ಈ ಸಮಿತಿ, ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭೆ ಸ್ಪೀಕರ್ ಅವರಿಗೆ ಮನವಿ ಮಾಡಲು ಅವಕಾಶವಿದೆ. ಆದ್ದರಿಂದ, ಪಕ್ಷದ ಮುಂದಿನ ನಡೆಯೂ ಕುತೂಹಲ ಮೂಡಿಸಿದೆ. [8 ಭಿನ್ನಮತೀಯ ಶಾಸಕರಿಗೆ ಅಮಾನತು ಶಿಕ್ಷೆ]
ಅಮಾನತು ಏಕೆ? : ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರಿಗೆ ಮತ ನೀಡಬೇಕು ಎಂದು ಜೆಡಿಎಸ್ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿತ್ತು. ಆದರೆ, 8 ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ. ಪಕ್ಷದ ಘನತೆಗೆ ಧಕ್ಕೆ ತರುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಭಾನುವಾರದಿಂದಲೇ ಜಾರಿಗೆ ಬರುವಂತೆ ಎಲ್ಲರನ್ನೂ ಅಮಾನತು ಮಾಡಲಾಗಿದೆ. ['ಜಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ']
ಕಾದು ನೋಡಬಹುದು : 2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ, ಭಿನ್ನಮತೀಯ ಶಾಸಕರು ಕಾದು ನೋಡುವ ತಂತ್ರ ಅನುಸರಿಸಬಹುದು. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸೇರುವುದೋ ಅಥವ ಪಕ್ಷೇತರರಾಗಿ ಕಣಕ್ಕಿಳಿಯುವುದೋ? ಎಂದು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. [ರಾಜ್ಯಸಭೆ: ಕಾಂಗ್ರೆಸ್ 3, ಬಿಜೆಪಿ 1, ಜೆಡಿಎಸ್ ಶೂನ್ಯ]
ಅಮಾನತುಗೊಂಡ ಶಾಸಕರು
* ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ)
* ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಪುರ)
* ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ)
* ಚೆಲುವರಾಯ ಸ್ವಾಮಿ (ನಾಗಮಂಗಲ)
* ಎಚ್.ಸಿ.ಬಾಲಕೃಷ್ಣ (ಮಾಗಡಿ)
* ಇಕ್ಬಾಲ್ ಅನ್ಸಾರಿ (ಗಂಗಾವತಿ)
* ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ)
* ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ)












Click it and Unblock the Notifications