Narendra Modi: ಐ ಲವ್ ಮೋದಿ, ಐ ಲೈಕ್ ಮೋದಿ ಎಂದ ಇಬ್ರಾಹಿಂ!
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಹೇಳಿಕೆ ಇದೀಗ ಕರ್ನಾಟಕ ರಾಜಕೀಯದಲ್ಲಿ ಸುನಾಮಿ ಎಬ್ಬಿಸಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಮುಕ್ತವಾಗಿ ಮಾತನಾಡಿರುವ ಸಿಎಂ ಇಬ್ರಾಹಿಂ ಐ ಲವ್ ಮೋದಿ ಐ ಲೈಕ್ ಮೋದಿ ಎಂದಿದ್ದಾರೆ. ಅಷ್ಟಕ್ಕೂ ಸಿಎಂ ಇಬ್ರಾಹಿಂ ದಿಢೀರ್ ಇಂತಹ ಹೇಳಿಕೆ ನೀಡಲು ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು, ಕಾಂಗ್ರೆಸ್ ವಿರುದ್ಧ ಇವತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ನನಗೆ ಪಶ್ಚಾತ್ತಾಪ ಇಲ್ಲ, ಮತ್ತೆ ವಾಪಸ್ ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಎಂದು ಸಿಎಂ ಇಬ್ರಾಹಿಂ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿಪಕ್ಷಗಳ ಒಗ್ಗಟ್ಟಿನ ವಿಚಾರ ಸೇರಿ ಇಂಡಿಯಾ ಒಕ್ಕೂಟದ ಬಗ್ಗೆಯೂ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಮುಕ್ತವಾಗಿ ಸಿಎಂ ಇಬ್ರಾಹಿಂ ಮಾತನಾಡಿದ್ದಾರೆ. ಆಗ ಐ ಲವ್ ಮೋದಿ.. ಐ ಲೈಕ್ ಹಿಮ್ ಅಂದಿದ್ದಾರೆ.

ಮೋದಿಗೂ ನನಗೂ ವೈಯಕ್ತಿಕವಾಗಿ ಏನಿಲ್ಲ!
ಇದೇ ವೇಳೆ ತಾವು ಪ್ರಧಾನಿ ಮೋದಿ ಅವರನ್ನು ಯಾಕೆ ಇಷ್ಟ ಪಡುವುದು? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಇಬ್ರಾಹಿಂ. ನನಗೆ ವೈಯಕ್ತಿಕವಾಗಿ ಮೋದಿ ಅವರ ಕುರಿತು ಏನು ಇಲ್ಲ. ಆದ್ರೆ ಸೈದ್ಧಾಂತಿಕ ನಿಲುವುಗಳ ವಿಚಾರದಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಅಷ್ಟೇ ಎಂದಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಕೂಡ ಮಾತನಾಡಿರುವ ಇಬ್ರಾಹಿಂ, ನನ್ನನ್ನು ಮಾಜಿ ಪ್ರಧಾನಿ ವಾಜಪೇಯಿ ಅವರು ಮಗನಂತೆ ನೋಡುತ್ತಿದ್ದರು. ನನಗೆ ಅಧಿಕಾರ ಆಸೆ ಇದ್ದಿದ್ದರೆ ಕೇಂದ್ರದಲ್ಲಿ ಮಂತ್ರಿ ಆಗಿರುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಮೊದಲು ಪ್ರಧಾನಿ ಯಾರು ಹೇಳಿ!
ಮೋದಿ ನಾಯಕರಾಗಿ ಬಿಂಬಿತರಾಗಿದ್ದಾರೆ. ಜನ ಬದಲಾವಣೆ ಕೇಳ್ತಾ ಇದ್ದಾರೆ, ನಿರುದ್ಯೋಗ ಜಾಸ್ತಿ ಆಗಿದೆ, ಆದ್ರೆ ಬದಲಾವಣೆ ಏನು ಹಾಗಾದರೆ? 26 ಪಕ್ಷಗಳ ನಾಯಕರು ಸೇರಿ ಮೀಟಿಂಗ್ ಮಾಡಿದ್ದೀರಿ, ಯಾರು ಪ್ರಧಾನ ಮಂತ್ರಿ ಅಭ್ಯರ್ಥಿ ಅಂತಾನೇ ಗೊತ್ತಿಲ್ಲ. ಮೊದಲು ಪ್ರಧಾನಿ ಯಾರಾಗುತ್ತಾರೆ ಅಂತಾ ಅಭ್ಯರ್ಥಿಯನ್ನ ಆಯ್ಕೆ ಮಾಡಿ. ಆಗ ಮತ್ತಷ್ಟು ಮತಗಳು ನಿಮಗೆ ಸಿಗಲಿವೆ. ಅದನ್ನು ಬಿಟ್ಟು ಗೊಂದಲದ ಮೂಲಕ ಚುನಾವಣೆ ಎದುರಿಸಲು ಹೋಗುತ್ತಿದ್ದರೆ ಸೋಲು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ ಸಿಎಂ ಇಬ್ರಾಹಿಂ. ಈ ಮೂಲಕ INDIA ಒಕ್ಕೂಟ ವಿರುದ್ಧ ಕಿಡಿಕಾರಿದ್ದಾರೆ ಸಿಎಂ ಇಬ್ರಾಹಿಂ.

ಬಿಜೆಪಿ & ಜೆಡಿಎಸ್ ಹೊಂದಾಣಿಕೆ ಬಗ್ಗೆ...
ಹಾಗೇ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತೀಕ್ಷ್ಣವಾಗಿ ರಿಯಾಕ್ಷನ್ ಕೊಟ್ಟಿರುವ ಸಿಎಂ ಇಬ್ರಾಹಿಂ. ನಾವು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಂತಾ ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ, ಆದ್ರೆ ವಿರೋಧ ಪಕ್ಷವಾಗಿ ನಾವು ಮತ್ತೊಂದು ವಿರೋಧ ಪಕ್ಷದ ಹೋರಾಟದಲ್ಲಿ ಜೊತೆಯಾಗಿರಬೇಕು. ಇದನ್ನು ಬಿಟ್ಟು ನಾವು ಎಲೆಕ್ಷನ್ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೀವಾ? ಹಾಗೆ ನಡೆದಿದ್ದರೆ ಕಾಂಗ್ರೆಸ್ ಇಂತಹ ಆರೋಪ ಮಾಡಲಿ ಎಂದು ಕೆಂಡಕಾರಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ರೊಚ್ಚಿಗೆದ್ದಿದ್ದರು ಸಿಎಂ ಇಬ್ರಾಹಿಂ.
ಒಟ್ನಲ್ಲಿ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷರು ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ. ಆದರೆ ಈವರೆಗೂ ಕಾಂಗ್ರೆಸ್ ನಾಯಕರು ಇಬ್ರಾಹಿಂ ಅವರ ಹೇಳಿಕೆಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ವಿಚಾರ ಮತ್ತಷ್ಟು ಕಿಚ್ಚು ಹಚ್ಚುವ ಲಕ್ಷಣವಂತು ಗೋಚರಿಸುತ್ತಿದ್ದು, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಫೈಟ್ ನಡೆಯೋದು ಪಕ್ಕಾ ಎನ್ನಬಹುದು.












Click it and Unblock the Notifications