28 ಲೋಕಸಭಾ ಕ್ಷೇತ್ರಗಳಲ್ಲಿ 12ರಲ್ಲಿ ಸ್ಪರ್ಧಿಸಲು ಜೆಡಿಎಸ್ ಬೇಡಿಕೆ ಸಾಧ್ಯತೆ
Recommended Video

ಬೆಂಗಳೂರು, ಅಕ್ಟೋಬರ್ 05: ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆ 2019 ರಲ್ಲಿ ಜಂಟಿಯಾಗಿಯೇ ಚುನಾವಣೆಗೆ ಸ್ಪರ್ಧಿಸವುದಾಗಿ ಈಗಾಗಲೇ ಘೋಷಿಸಿವೆ.
ಚುನಾವಣೆಯು ಇನ್ನು ಕೆಲವೇ ತಿಂಗಳುಗಳು ಇರುವ ಕಾರಣ ಇದೀಗ ಸೀಟು ಹಂಚಿಕೆ ಚರ್ಚೆ ಮೇಲಕ್ಕೇಳುತ್ತಿದ್ದು, ಜೆಡಿಎಸ್ ಪಕ್ಷವು ಲೋಕಸಭಾ ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಬಳಿ ಮಾತನಾಡಲು ಸಜ್ಜಾಗಿದೆ.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು ಅವುಗಳಲ್ಲಿ 12 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ ಇಚ್ಛಿಸಿದ್ದು, ಈ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಡಲು ಸಿದ್ದತೆ ನಡೆಸಿದೆ. ಹೀಗಾದಲ್ಲಿ ಕೇವಲ 14 ಸ್ಥಾನಗಳಷ್ಟೆ ಕಾಂಗ್ರೆಸ್‌ಗೆ ದೊರಕುತ್ತವೆ.

ಯಾವ ಯಾವ ಕ್ಷೇತ್ರಗಳ ಮೇಲೆ ಕಣ್ಣು
ಜೆಡಿಎಸ್ ಪಕ್ಷವು ಹಳೆ ಮೈಸೂರು, ಕರಾವಳಿ ಹಾಗೂ ಉತ್ತರ ಕರ್ನಾಟಕ ಮೂರು ಭಾಗಗಳಲ್ಲಿ ಸೀಟುಗಳಿಗೆ ಬೇಡಿಕೆ ಇಡಲು ಸಜ್ಜಾಗಿದೆ. ಮಂಡ್ಯ, ಹಾಸನ, ಮೈಸೂರು, ವಿಜಯಪುರ, ಶಿವಮೊಗ್ಗ, ಕೋಲಾರ, ಉಡುಪಿ ಜಿಲ್ಲೆಗಳಲ್ಲಿ ಸೀಟಿಗಾಗಿ ಜೆಡಿಎಸ್ ಬೇಡಿಕೆ ಇಡಲಿದೆ.

ಕಳೆದ ಚುನಾವಣೆಯಲ್ಲಿ ಎರಡು ಸ್ಥಾನವಷ್ಟೆ ಗೆದ್ದಿದೆ ಜೆಡಿಎಸ್
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರವೇ ಗೆದ್ದಿದೆ. ಹಾಸನದಲ್ಲಿ ದೇವೇಗೌಡರು, ಮಂಡ್ಯದಲ್ಲಿ ಸಿ.ಎಸ್.ಪುಟ್ಟರಾಜು ಇಬ್ಬರೆ ಗೆದ್ದಿದ್ದರು. ಆದರೆ ಈ ಬಾರಿ 12 ಕ್ಷೇತ್ರಗಳಲ್ಲಿ ಟಿಕೆಟ್ ಕೇಳುತ್ತಿರುವುದು ಎರಡೂ ಪಕ್ಷಗಳ ನಡುವೆ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಜೆಡಿಎಸ್‌ಗೆ ಇದು ಸದಾವಕಾಶ
ಲೋಕಸಭೆ ಚುನಾವೆಯಲ್ಲಿ ಹೀನಾಯವಾಗಿ ಸೋಲನುಭವಿಸುತ್ತಲೇ ಬಂದಿರುವ ಜೆಡಿಎಸ್‌ಗೆ ಈ ಮೈತ್ರಿ ಸಮಯವು ಸದಾವಕಾಶವಾಗಿದ್ದು. ಕಾಂಗ್ರೆಸ್ ಬೆಂಬಲದಿಂದ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಪಕ್ಷವನ್ನು ಜೀವಂತಗೊಳಿಸುವ ಯೋಜನೆ ಜೆಡಿಎಸ್ ನದ್ದು ಹಾಗಾಗಿಯೇ ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಬೇಡಿಕೆ ಇಟ್ಟಿದೆ.

ಕಾಂಗ್ರೆಸ್-ಜೆಡಿಎಸ್ ಜಟಾಪಟಿ ಸಾಧ್ಯತೆ
ಜೆಡಿಎಸ್ ಪಕ್ಷವು 12 ಕ್ಷೇತ್ರಗಳನ್ನು ಕೇಳಿದರೆ ಕಾಂಗ್ರೆಸ್‌ಗೆ ಕೇವಲ 14 ಸ್ಥಾನಗಳು ಉಳಿಯುತ್ತವೆ. ಕಳೆದ ಚುನಾವಣೆಯಲ್ಲಿ 9 ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಸೋತಿತ್ತು. ಕಳೆದ ಬಾರಿ ಕೇವಲ 2 ಸೀಟು ಗೆದ್ದಿದ್ದ ಪಕ್ಷಕ್ಕೆ ಹೆಚ್ಚು ಟಿಕೆಟ್ ಕೊಟ್ಟಲ್ಲಿ ಕಾಂಗ್ರೆಸ್ ನಲ್ಲಿ ಒಳಜಗಳ ಆಗುವುದು ಖಂಡಿತ ಎಂದೇ ವಿಶ್ಲೇಷಲಾಗುತ್ತಿದೆ.

ದೇವೇಗೌಡರ ಮೂಲಕ ಚರ್ಚೆ
ಈಗಾಗಲೇ ಜೆಡಿಎಸ್ ಪಕ್ಷದ ಅಧ್ಯಕ್ಷ ಎಚ್.ವಿಶ್ವನಾಥ್ ಅವರು 12 ಸ್ಥಾನಗಳು ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡಿದ್ದಾರೆ ಎನ್ನಲಾಗಿದ್ದು. ಪಕ್ಷದ ವರಿಷ್ಠ ದೇವೇಗೌಡ ಅವರ ಮೂಲಕ ಕಾಂಗ್ರೆಸ್ ಹೈಕಮಾಂಡ್ ಬಳಿ ವಿಷಯ ಪ್ರಸ್ತಾಪಕ್ಕೆ ಸಮಯಕ್ಕಾಗಿ ಕಾಯುತ್ತಿದ್ದಾರೆ.

ದೇವೇಗೌಡ vs ಸಿದ್ದರಾಮಯ್ಯ ಆಗಲಿದೆ ಸೀಟು ಹಂಚಿಕೆ ಚರ್ಚೆ
ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆ ಸಿದ್ದರಾಮಯ್ಯ vs ದೇವೇಗೌಡ ಆಗುವ ಸಾಧ್ಯತೆಯೂ ಇದೆ. ಸೀಟು ಹಂಚಿಕೆ ಚರ್ಚೆ ಈ ಇಬ್ಬರು ದಿಗ್ಗಜರ ನಡುವೆಯೇ ಆಗಲಿದೆ ಎನ್ನಲಾಗಿದ್ದು. ಇಬ್ಬರೂ ನಾಯಕರ ನಡುವೆ ಮನಸ್ಥಾಪ ಹೆಚ್ಚಾಗುತ್ತದೆಯೋ ಅಥವಾ ಪಕ್ಷಗಳ ಹಿತದೃಷ್ಠಿಯಿಂದ ಯಾರು ಸೋತು ಯಾರು ಗೆಲ್ಲುತ್ತಾರೋ ನೋಡಬೇಕಿದೆ.

ಜೆಡಿಎಸ್-ಕಾಂಗ್ರೆಸ್ ಒಂದಾದರೆ ಬಿಜೆಪಿಗೆ ಕಷ್ಟ
ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಒಂದಾದರೆ ಬಿಜೆಪಿಗೆ ಸಹಜವಾಗಿಯೇ ಚುನಾವಣೆಯಲ್ಲಿ ಗೆಲುವು ಕಷ್ಟವಾಗಲಿದೆ. ಆದರೆ ಎರಡೂ ಪಕ್ಷಗಳು ಸೀಟು ಹಂಚಿಕೆ ವಿಷಯದಲ್ಲಿ ಕಿತ್ತಾಡಿಕೊಳ್ಳದಿದ್ದರೆ ಮಾತ್ರವೇ ಬಿಜೆಪಿಯನ್ನು ಹಣಿಯಲು ಸಾಧ್ಯ ಇಲ್ಲದಿದ್ದರೆ ಬಿಜೆಪಿಯ ಹಾದಿ ಸುಲಭವಾಗಲಿದೆ.

ಮಾಯಾವತಿ ದಾರಿ ಅನುಸರಿಸುವರೇ ದೇವೇಗೌಡ
ಮಾಯಾವತಿ ಈಗಾಗಲೇ ಕಾಂಗ್ರೆಸ್ ಜೊತೆ ಮೈತ್ರಿಗೆ ಒಲ್ಲೆ ಎಂದಿದ್ದಾರೆ. ಅದರ ಪರಿಣಾಮ ರಾಜ್ಯದ ಮೇಲೂ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜೆಡಿಎಸ್ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಜೊತೆ ಮೈತ್ರಿಯಲ್ಲಿತ್ತು. ಮಾಯಾವತಿ ಅನುಸರಿಸಿದ ದಾರಿಯನ್ನೇ ದೇವೇಗೌಡರು ಅನುಸರಿಸಿದರೂ ಆಶ್ಚರ್ಯ ಪಡಬೇಕಿಲ್ಲ ಆದರೆ ಆ ಸಾಧ್ಯತೆ ಬಹಳ ಕಡಿಮೆ.












Click it and Unblock the Notifications