ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್‌ಗೆ ದಸರಾ ಉಡುಗೊರೆ ನೀಡಿದ ಪಕ್ಷ
ಬೆಂಗಳೂರು, ಅಕ್ಟೋಬರ್ 17 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಪಕ್ಷ ದಸರಾ ಹಬ್ಬದ ಉಡುಗೊರೆ ನೀಡಿದೆ. ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಸಂಚಾರ ನಡೆಸಲು ಪಕ್ಷದ ವತಿಯಿಂದ ಅವರಿಗೆ ಕಾರನ್ನು ನೀಡಲಾಗಿದೆ.
ಬುಧವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಹೊಸ ಇನ್ನೋವಾ ಕ್ರಿಸ್ಟಾ ಕಾರಿಗೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಪೂಜೆ ಸಲ್ಲಿಸಿದರು. ಆದರೆ, ಹೊಸ ಕಾರಿನ ಕೀ ಪಡೆದುಕೊಳ್ಳಲು ವಿಶ್ವನಾಥ್ ಅವರು ಇರಲಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಪಕ್ಷದ ಅಧ್ಯಕ್ಷರಿಗೆ ಕಾರನ್ನು ನೀಡಲಾಗುತ್ತದೆ. ಆದರೆ. ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷದಲ್ಲಿ ಪಕ್ಷದ ಅಧ್ಯಕ್ಷರಿಗೆ ಕಾರನ್ನು ನೀಡಲಾಗಿದೆ. ಕಾರು ಖರೀದಿಗೆ ಜೆಡಿಎಸ್‌ನ ಶಾಸಕರು ಸಹ ಸಹಾಯ ಮಾಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದರು. 2019ರ ಲೋಕಸಭೆ ಚುನಾವಣೆ ಎದುರಾಗುತ್ತಿದ್ದು, ಅವರು ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡಬೇಕಿದೆ...

ಸಭೆಯಲ್ಲಿ ಚರ್ಚೆ ನಡೆದಿತ್ತು
ಪಕ್ಷದ ರಾಜ್ಯಾಧ್ಯಕ್ಷರಿಗೆ ಪಕ್ಷದ ವತಿಯಿಂದ ಇದುವರೆಗೂ ಕಾರು ನೀಡುತ್ತಿರಲಿಲ್ಲ. ಆದರೆ, ಹಾಸನದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾರು ನೀಡುವ ಕುರಿತು ಎಚ್.ಡಿ.ದೇವೇಗೌಡರು ವಿಷಯ ಪ್ರಸ್ತಾಪಿಸಿದ್ದರು. ಶಾಸಕರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು.

ನಿರ್ವಹಣೆಗೆ ಹೆಚ್ಚಿನ ಹಣ
ಮೊದಲು ಟೊಯೋಟಾ ಫಾರ್ಚುನರ್ ಕಾರನ್ನು ರಾಜ್ಯಾಧ್ಯಕ್ಷರಿಗೆ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ, ಅದರ ನಿರ್ವಹಣೆ ವೆಚ್ಚ ಅಧಿಕವಾಗಿದೆ. ಆದ್ದರಿಂದ, ಆ ಕಾರು ಬೇಡ ಎಂದು ವಿಶ್ವನಾಥ್ ಹೇಳಿದ್ದರು. ಆದ್ದರಿಂದ, ಇನ್ನೋವಾ ಕ್ರಿಸ್ಟಾ ಕಾರನ್ನು ನೀಡಲಾಗಿದೆ.

ಹೊಸ ಕಾರಿಗೆ ಪೂಜೆ
ಬುಧವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಹೊಸ ಕಾರಿಗೆ ಪೂಜೆ ಸಲ್ಲಿಸಲಾಯಿತು. ಎಚ್.ಡಿ.ದೇವೇಗೌಡರು ಕಾರಿಗೆ ಪೂಜೆ ಸಲ್ಲಿಸಿ, ಕೀಯನ್ನು ಕಚೇರಿಯಲ್ಲಿಟ್ಟಿದ್ದಾರೆ. ಆದರೆ, ವಿಶ್ವನಾಥ್ ಪೂಜಾ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

ವಿಶ್ವನಾಥ್‌ಗೆ ಅನಾರೋಗ್ಯ
ಎಚ್.ವಿಶ್ವನಾಥ್ ಅನಾರೋಗ್ಯದ ಕಾರಣ ಬುಧವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಕಿಡ್ನಿಯಲ್ಲಿ ಕಲ್ಲಾಗಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯಲಿದ್ದಾರೆ. ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.












Click it and Unblock the Notifications