ಸಂಸದ ಪ್ರಜ್ವಲ್ ರೇವಣ್ಣ ಸಂಸತ್‌ಗೆ ಗೈರು: ಕಾರಣ ಏನು?
Recommended Video
ಬೆಂಗಳೂರು, ಜೂನ್ 18: ನಿನ್ನೆ ನಡೆದ 17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನದಲ್ಲಿ ರಾಜ್ಯದ ಎಲ್ಲ ಸಂಸದರೂ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಹಾಸನ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿಲ್ಲ.
ಮೊದಲ ಬಾರಿಗೆ ಸಂಸದರಾಗಿ ಆಯ್ಕೆ ಆಗಿರುವ ಪ್ರಜ್ವಲ್ ರೇವಣ್ಣ ಅವರು ಮೊದಲ ದಿನವೇ ಸಂಸತ್‌ಗೆ ಗೈರಾಗಿದ್ದಾರೆ. ಆದರೆ ಗೈರಾಗಿದ್ದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.
ಅನಾರೋಗ್ಯದ ಕಾರಣದಿಂದ ಸಂಸತ್‌ಗೆ ಗೈರಾಗಿದ್ದೆನೆಂದು ಪ್ರಜ್ವಲ್ ರೇವಣ್ಣ ನಿನ್ನೆ ತಮ್ಮನ್ನು ಸಂಪರ್ಕಿಸಿದ ಪತ್ರಕರ್ತರಿಗೆ ತಿಳಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಇಂದು ಸಹ ಸಂಸತ್ ಕಲಾಪಕ್ಕೆ ಗೈರಾಗಿದ್ದಾರೆ.
ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, ಅನಾರೋಗ್ಯದ ಕಾರಣದಿಂದ ಸಂಸತ್‌ಗೆ ಹೋಗಲಾಗಿಲ್ಲ, ಜೂನ್ 19 ರಂದು ಸಂಸತ್‌ಗೆ ಹೋಗುತ್ತೇನೆ, ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

27 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ
ಪ್ರಜ್ವಲ್ ರೇವಣ್ಣ ಹೊರತುಪಡಿಸಿ ಉಳಿದ ಕರ್ನಾಟಕದ 27 ಸಂಸದರೂ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು. ಅದರಲ್ಲಿ ಅನಂತ್‌ಕುಮಾರ್ ಹೆಗಡೆ ಹೊರತುಪಡಿಸಿ ಉಳಿದವರೆಲ್ಲರೂ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು. ಅನಂತ್‌ಕುಮಾರ್ ಹೆಗಡೆ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬಜೆಟ್ ಜೊತೆ ಹಲವು ಮಸೂದೆ ಮಂಡನೆ
ಜೂನ್ 17ರಿಂದ ಆರಂಭವಾಗಿರುವ ಮುಂಗಾರು ಅಧಿವೇಶನವು ಜುಲೈ 26 ರವರೆಗೆ ನಡೆಯಲಿದೆ. ಬಜೆಟ್ ಮಂಡನೆ ಸೇರಿದಂತೆ ತ್ರಿವಳಿ ತಲಾಖ್ ಹಾಗೂ ಇನ್ನೂ ಅನೇಕ ಮಸೂದೆಗಳು ಸದನದಲ್ಲಿ ಮಂಡನೆ ಆಗಲಿವೆ.

ಜೆಡಿಎಸ್‌ನ ಏಕೈಕ ಸಂಸದ ಪ್ರಜ್ವಲ್ ರೇವಣ್ಣ
ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದ ಪ್ರಜ್ವಲ್ ರೇವಣ್ಣ ಅವರು ಬಿಜೆಪಿಯ ಎ.ಮಂಜು ವಿರುದ್ಧ ಜಯಗಳಿಸಿದ್ದರು. ಜೆಡಿಎಸ್‌ನಿಂದ ಗೆದ್ದಿರುವ ಏಕೈಕ ಸಂಸದರು ಪ್ರಜ್ವಲ್ ರೇವಣ್ಣ.

ರಾಜೀನಾಮೆ ಕೊಡುತ್ತೇನೆಂದಿದ್ದ ಪ್ರಜ್ವಲ್ ರೇವಣ್ಣ
ದೇವೇಗೌಡ ಅವರಿಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಹಾಸನ ಕ್ಷೇತ್ರವನ್ನು ಮತ್ತೆ ದೇವೇಗೌಡ ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಪ್ರಜ್ವಲರ್ ರೇವಣ್ಣ ಅವರು ಹೇಳಿದ್ದರು. ಆದರೆ ಇದಕ್ಕೆ ತೀವ್ರ ಟೀಕೆ ವ್ಯಕ್ತವಾದ ಕಾರಣ ಆ ಯೋಚನೆ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications