ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಸಿದ್ಧಿಸಿರುವ ಕಲೆ: ಜೆಡಿಎಸ್
ಬೆಂಗಳೂರು, ನವೆಂಬರ್ 12: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ ಅಥವಾ ನೀಡಿಲ್ಲ ಎನ್ನುವುದು ಬಿಜೆಪಿ ಹಾಗೂ ಜೆಡಿಎಸ್ ಜಟಾಪಟಿಗೆ ಕಾರಣವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡದೇ ಇರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿತ್ತು.
ಜೆಡಿಎಸ್ ಆರೋಪಕ್ಕೆ ಉತ್ತರಿಸಿದ್ದ ಬಿಜೆಪಿ, ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೆ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಕಿಡಿಕಾರಿತ್ತು.
ಇದಷ್ಟೇ ಅಲ್ಲ, ಕನ್ನಡದ ಅಸ್ಮಿತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಈ ಮಣ್ಣಿಗೆ ಸೇವೆ ಸಲ್ಲಿಸಿದ ಸಾಧಕರಾದಿಯಾಗಿ, ನಮ್ಮ ರಾಜ್ಯದ ಕಟ್ಟ ಕಡೆಯಲ್ಲಿರುವವರನ್ನೂ ಮರೆಯದೆ, ಹಿಂಬಾಲಿಸಿ ಗುರುತಿಸಿದ್ದು ಬಿಜೆಪಿ. ಕುಟುಂಬವನ್ನೇ ಪಕ್ಷವನ್ನಾಗಿಸಿಕೊಂಡ ಜೆಡಿಎಸ್‌ಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಯಾವತ್ತಿಗೂ ಬಿಡಿಸಲಾಗದ ಒಗಟು ಎಂದು ಬಿಜೆಪಿ ಲೇವಡಿ ಮಾಡಿತ್ತು.

ನವೆಂಬರ್ 11ರ ಕಾರ್ಯಕ್ರಮಕ್ಕೆ ಸಿಎಂ ಪತ್ರ ಬರೆದಿದ್ದು ಯಾವಾಗ..?
ಬಿಜೆಪಿ ಟ್ವೀಟ್‌ಗೆ ತಿರುಗೇಟು ನೀಡಿರುವ ಜೆಡಿಎಸ್, ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲ ಪಕ್ಷಕ್ಕೆ ಸಿದ್ಧಿಸಿರುವ ಕಲೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ. ಆದರೆ ಮುಖ್ಯಮಂತ್ರಿಗಳೇ ಪತ್ರ ಬರೆದು ಮಾಜಿ ಪ್ರಧಾನಿ ದೇವೇ ಗೌಡರನ್ನು ಆಹ್ವಾನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ, ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ ಎಂದು ಆರೋಪಿಸಿದೆ.
ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳಿಗೆ ಕರೆ ಮಾಡಿ ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಟ್ವೀಟಿಸಿದೆ. ಸರಿ, ನವೆಂಬರ್ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಪತ್ರ ಬರೆದಿದ್ದು ಯಾವಾಗ..? ಆ ಪತ್ರವನ್ನು ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ..? ಜೆಡಿಎಸ್ ಎಂದು ಪ್ರಶ್ನಿಸಿದೆ

ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ..?
ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ, ಹೇಗೆ..? ಘನವೇತ್ತ ಮುಖ್ಯಮಂತ್ರಿಗಳು ಬರೆದ ʼಘನವೇತ್ತʼ ಪತ್ರವನ್ನೊಮ್ಮೆ ʼಸಂಘಸಂಸ್ಕಾರʼದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ..? ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ..? ಮರುದಿನ 12.50ರ ಸಮಾರಂಭಕ್ಕೆ ರಾತ್ರಿ 9 ಗಂಟೆಗೆ ಮಾಜಿ ಪ್ರಧಾನಿಗಳಿಗೆ ಕಾಟಾಚಾರದ ಕರೆ ಮಾಡಿದ ಮುಖ್ಯಮಂತ್ರಿಗಳು, ತಾವು ಬರೆದ ಪತ್ರವನ್ನು ತಲುಪಿಸಿದ್ದು ಮಧ್ಯರಾತ್ರಿ 12.30 ಗಂಟೆಗೆ. ಹಾಗಾದರೆ, ಅವರ ಮೊದಲ ಪತ್ರ ಹೋಗಿದ್ದು ಯಾರಿಗೆ..? ಇಂಥಹ ವಿಷಯದಲ್ಲಿ ಜಬಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ವರ್ತಿಸುವ ರೀತಿ ಹೀಗೇನಾ..? ಎಂದು ಜೆಡಿಎಸ್ ಕೇಳಿದೆ.

ಭಾರತೀಯರನ್ನು ದೆಹಲಿ ಗುಲಾಮರನ್ನಾಗಿ ಮಾಡಲು ಹೊರಟಿದೆ
ಇದರಲ್ಲಿ ಸುಳ್ಳಾಡುವುದೇನಿದೆ..? ಮುಖ್ಯಮಂತ್ರಿಗಳು ಬರೆದ ಪತ್ರವನ್ನು ಲಗತ್ತಿಸಲಾಗಿದೆ. ಹಾಗಾದರೆ, ಮುಖ್ಯಮಂತ್ರಿಗಳೇ ಎಲ್ಲವನ್ನೂ ಹೇಳಲಿ. ಜನರಿಗೂ ಸತ್ಯ ಯಾವುದು..? ಸುಳ್ಳು ಯಾವುದು? ಎನ್ನುವುದು ತಿಳಿಯಲಿ. ಸತ್ಯ ಹೇಳುವ ದಮ್ಮು, ತಾಖತ್ತು ಮುಖ್ಯಮಂತ್ರಿಗಳಿಗೆ ಇದೆ ಎಂದು ನಾವು ಭಾವಿಸುತ್ತೇವೆ. ಇನ್ನು ಕನ್ನಡದ ಆಸ್ಮಿತೆ ಪ್ರಶ್ನೆ. ಬಿಜೆಪಿಗೆ ನಾಚಿಕೆಯಾಗಬೇಕು, ಹಿಂದಿ ಹೇರಿಕೆ ವಾಕರಿಕೆ ಬರುವಷ್ಟಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಪಂಗನಾಮ, ಈ ನೆಲದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಹತ್ತಿಕ್ಕಿ,ಇಡೀ ದಕ್ಷಿಣ ಭಾರತೀಯರನ್ನು ದೆಹಲಿ ಗುಲಾಮರನ್ನಾಗಿ ಮಾಡಲು ಹೊರಟಿರುವ ಬಿಜೆಪಿಗರಾ ಕನ್ನಡದ ಮಣ್ಣಿನ ಮಕ್ಕಳನ್ನು ಗುರುತಿಸಿದ್ದು..?

ಕರ್ನಾಟಕದಲ್ಲಿ ಬೆಳೆದು ನಿಂತ ಬಿಜೆಪಿ ವಂಶವೃಕ್ಷಗಳೆಷ್ಟು..?
ಸಬ್ ಕಾ ಸಾಥ್, ಸಬ್ ಕಾ ವಿಕಾಸ್', ಇದು ಭಾರತ ಕಂಡ ಪರಮ ಢೋಂಗಿ ಘೋಷಣೆ. ಇದಕ್ಕೆ ʼಸಬ್ ಕಾ ಸರ್ವನಾಶ್ʼ ಎಂದು ಸೇರಿದರೆ ಪರಿಪೂರ್ಣ. ಕರ್ನಾಟಕದಲ್ಲಿ ಶಿಕ್ಷಣ, ಧರ್ಮ, ಜಾತಿ, ಆಚಾರ, ವಿಚಾರ, ಆಹಾರ, ಉಡುಪುಗಳ ವಿಷಯದಲ್ಲೂ ಬಿಜೆಪಿ ಮಾಡಿದ್ದು ಸಾಕ್ಷಾತ್ ಸರ್ವನಾಶವೇ. ಕುಟುಂಬ ರಾಜಕಾರಣ ಅಂತೀರಾ..? ಗುಜರಾತಿನಿಂದ ಶುರುವಾಗಿ ದೆಹಲಿವರೆಗೂ ಹಬ್ಬಿ, ಬಿಸಿಸಿಐ ಒಳಹೊಕ್ಕಿ ಕೂತಿದ್ದು ಯಾರ ಕುಟುಂಬ..? ಕರ್ನಾಟಕದಲ್ಲಿ ಬೆಳೆದು ನಿಂತ ಬಿಜೆಪಿ ವಂಶವೃಕ್ಷಗಳೆಷ್ಟು..? ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್ ನಿಂದ ಒಡಿಶಾವರೆಗೆ ವ್ಯಾಪಿಸಿರುವ ಬಿಜೆಪಿ ವಂಶವೃಕ್ಷಗಳ ಕೊಂಬೆಗಳ ಲೆಕ್ಕ ಬಿಚ್ಚಿಡಬೇಕೆ..? ಎಂದು ಜೆಡಿಎಸ್ ಗುಡುಗಿದೆ.












Click it and Unblock the Notifications