ನಿಮ್ಮ ಅತ್ತಿಗೆ ಒಂದು ಬಾರಿಯೂ ಶಾಸಕಿಯಾಗಬಾರದೇ?

ಕುಟುಂಬ ರಾಜಕಾರಣದ ವಿಚಾರದಲ್ಲಿ ಕರ್ನಾಟಕ ಬಿಜೆಪಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಸರಣಿ ಪ್ರಶ್ನೆಗಳನ್ನು ಕೇಳಿದೆ.

ಬೆಂಗಳೂರು, ಫೆಬ್ರವರಿ 15; ' ಎಚ್. ಡಿ. ಕುಮಾರಸ್ವಾಮಿ ಅವರೇ ತಮ್ಮ ಪತ್ನಿ ಮೂರು ಬಾರಿ ಶಾಸಕಿಯಾಗಬಹುದು, ಆದರೆ ನಿಮ್ಮ ಅತ್ತಿಗೆ ಒಂದು ಬಾರಿಯೂ ಶಾಸಕಿಯಾಗಬಾರದೇ?' ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಜೆಡಿಎಸ್ ಪಕ್ಷದ ಕುಟುಂಬ ರಾಜಕೀಯದ ಬಗ್ಗೆ ಟೀಕೆ ಮಾಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ, ಹಾಸನದ ಜೆಡಿಎಸ್ ಟಿಕೆಟ್ ವಿಚಾರಗಳನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

'ಕುಟುಂಬ ರಾಜಕಾರಣದ ತುತ್ತತುದಿಯಲ್ಲಿ ಇರುವ @hd_kumaraswamy ಅವರು, ಮತ್ತೊಬ್ಬರತ್ತ ಬೊಟ್ಟು ಮಾಡಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದಿರುವುದು ಹಾಸ್ಯಾಸ್ಪದ. ಸೂಟ್ ಕೇಸ್ ತಲುಪಿಸದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಕುಟುಂಬದ 9 ಮಂದಿಗೆ ಮಣೆ ಹಾಕಿರುವುದನ್ನು ಏನನ್ನಬೇಕು?' ಎಂದು ಬಿಜೆಪಿ ಪ್ರಶ್ನಿಸಿದೆ.

JDS Family Politics Karnataka BJP Questions To HD Kumaraswamy

'ಅಧಿಕಾರದ ಮದದಿಂದ ಮಂಡ್ಯ ಲೋಕಸಭಾ ಚುನಾವಣೆ ಗೆಲ್ಲಲು ಯತ್ನಿಸಿದ @hd_kumaraswamy ಅವರಿಗೆ ಜನತೆ ತಕ್ಕ ಉತ್ತರ ಕೊಟ್ಟು, ಕುಟುಂಬ ರಾಜಕಾರಣದ ಚಿಗುರನ್ನು ಚಿವುಟಿದರು. ಆದರೂ, ರಾಮನಗರದಲ್ಲಿ ಮತ್ತೊಮ್ಮೆ ಪುತ್ರನನ್ನು ಅಖಾಡಕ್ಕೆ ಇಳಿಸುತ್ತಿರುವುದು, ತಮ್ಮ ಸೋಲಿಗೂ ಕಾರಣವಾಗಬಹುದೆಂಬ ಆತಂಕ ಕುಮಾರಸ್ವಾಮಿ ಅವರಿಗಿದೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಹಾಸನ ಟಿಕೆಟ್ ವಿವಾದ; ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ, 'ಜೆಡಿಎಸ್‌ನಲ್ಲಿ ಮಕ್ಕಳು ಮೊಮ್ಮಕ್ಕಳ ಆದಿಯಾಗಿ ಸೊಸೆಯಂದಿರು ರಾಜಕಾರಣದಲ್ಲಿ ಸಕ್ರಿಯ. @hd_kumaraswamy ಅವರೇ ತಮ್ಮ ಪತ್ನಿ ಮೂರು ಬಾರಿ ಶಾಸಕಿಯಾಗಬಹುದು, ಆದರೆ ನಿಮ್ಮ ಅತ್ತಿಗೆ ಒಂದು ಬಾರಿಯೂ ಶಾಸಕಿಯಾಗಬಾರದೇ? ನಿಮ್ಮ ಕುಟುಂಬ ಕಲಹದಲ್ಲಿ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಿ ಬಿಟ್ಟರಲ್ಲಾ' ಎಂದು ಹೇಳಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಈಗ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಮುಂಬರುವ ಚುನಾವಣೆಗೆ ಮಾಜಿ ಸಚಿವ ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಎಚ್. ಡಿ. ಕುಮಾರಸ್ವಾಮಿ ಟಿಕೆಟ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ರಾಜ್ಯ ರಾಜಕೀಯದ ಚರ್ಚೆಯ ವಿಷಯವಾಗಿದೆ.

ಹಾಸನ ಕ್ಷೇತ್ರದ ಟಿಕೆಟ್ ವಿಚಾರದ ಚರ್ಚೆ ಆರಂಭವಾದ ಬಳಿಕ ಭಾನುವಾರ ಮೊದಲ ಬಾರಿಗೆ ಎಚ್. ಡಿ. ಕುಮಾರಸ್ವಾಮಿ ಎಚ್. ಡಿ. ರೇವಣ್ಣ ಕುಟುಂಬ ಜೊತೆ ಕಾಣಿಸಿಕೊಂಡರು. ಹೊಳೆನರಸೀಪುರ ತಾಲೂಕಿನ ನಗರ್ತಿ ಗ್ರಾಮದಲ್ಲಿ ಈಶ್ವರ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಎಚ್. ಡಿ. ರೇವಣ್ಣ ಕುಟುಂಬ ಸಮೇತ ಪಾಲ್ಗೊಂಡಿದ್ದರು.

ಎಚ್. ಡಿ. ಕುಮಾರಸ್ವಾಮಿ ಹಾಸನ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರಕಾಶ್ ಪುತ್ರ ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ನೀಡುವ ಚಿಂತನೆಯಲ್ಲಿದ್ದಾರೆ. ಈ ಮೂಲಕ ಕುಟುಂಬ ರಾಜಕೀಯದ ಆರೋಪದಿಂದ ತಪ್ಪಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಎಂಬುದು ಸುದ್ದಿ. ಆದರೆ ಎಚ್. ಡಿ. ರೇವಣ್ಣ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.

prajwal-revanna

ಎಚ್. ಡಿ. ರೇವಣ್ಣ ಹೊಳೆನರಸೀಪುರದ ಶಾಸಕರು. ಈ ಬಾರಿಯ ಚುನಾವಣೆಯಲ್ಲಿಯೂ ಅವರೇ ಅಭ್ಯರ್ಥಿ. ಹಾಸನದ ಸಂಸದರು ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯರು. ಇಂತಹ ಸಮಯದದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಟೀಕೆ ಎದುರಿಸಬೇಕಾಗುತ್ತದೆ ಎಂಬುದು ಕುಮಾರಸ್ವಾಮಿ ಅವರ ಆತಂಕವಾಗಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಜೆಡಿಎಸ್ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಂಚರತ್ನ ರಥಯಾತ್ರೆ ಮೂಲಕ ಎಚ್. ಡಿ. ಕುಮಾರಸ್ವಾಮಿ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗಳಿಸುವ ಗುರಿಯೊಂದಿಗೆ ಜನರ ಬಳಿ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+