ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ವಜಾ!
ಬೆಂಗಳೂರು ಅಕ್ಟೋಬರ್ 19: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಅವರನ್ನು ವಜಾಗೊಳಿಸಲಾಗಿದೆ. ಜೆಪಿ ಭವನದಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕೋರ್ ಕಮಿಟಿ ಸದಸ್ಯರಿಂದ ಒತ್ತಾಯ ಹೇರಲಾಗಿತ್ತು. ಹೀಗಾಗಿ ಸಭೆಯ ಬಳಿಕ ಇಬ್ರಾಹಿಂ ಅವರನ್ನು ವಜಾಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಕೋರ್ ಕಮಿಟಿ ಸದಸ್ಯರ ಸಭೆ ಕರೆಯಲಾಗಿತ್ತು. ಈ ವೇಳೆ ಈ ತೀರ್ಮಾನ ಕೈಗೊಳ್ಳಲಾಗಿದೆ. 'ನಮ್ಮದು ಒಂದೇ ಪಕ್ಷ ನಾವು ಬಿಜೆಪಿ ಪರ ನಿಲ್ಲುವುದಿಲ್ಲ' ಎಂದು ಹೇಳುವ ಮೂಲಕ ಪಕ್ಷದ ವಿರುದ್ಧ ಬಂಡಾಯವೆದ್ದ ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಪಕ್ಷ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜೊತೆಗೆ ನೂತನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈ ನಡುವೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಸಿದ್ಧವಾಗಿವೆ. ಇದಕ್ಕೆ ಜೆಡಿಎಸ್ ಸ್ವಪಕ್ಷದವರಿಂದಲೇ ವಿರೋಧ ವ್ಯಕ್ತವಾಗಿತ್ತು. ಇದನ್ನು ಸಿ.ಎಂ ಇಬ್ರಾಹಿಂ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಜೆಡಿಎಸ್ ಪಕ್ಷದ ವರಿಷ್ಠರು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಮಾತನಾಡುವಾಗ ಪಕ್ಷದವರೇ ಆದ ಸಿ.ಎಂ ಇಬ್ರಾಹಿಂ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಪಕ್ಷದಲ್ಲಿ ಗೊಂದಲ ವ್ಯಕ್ತವಾಗಿತ್ತು. ಹೀಗಾಗಿ ಬಂಡಾಯವೆದ್ದ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಸ್ಥಾನಕ್ಕೆ ಪಕ್ಷ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿ ಘೋಷಣೆ ಹೊರಡಿಸಿದೆ.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವರಿಷ್ಠ ಹೆಚ್‌ಡಿ ದೇವೇಗೌಡ ಅವರು, 'ಇಬ್ರಾಹಿಂ ಅವರನ್ನು ಪಕ್ಷದಿಂದ ತೆಗೆದಿಲ್ಲ. ಪಕ್ಷದ ಸಂವಿಧಾನದ ಪ್ರಕಾರ ಹೊಸ ಅಧ್ಯಕ್ಷ ರ ನೇಮಕ ಮಾಡಿದ್ದೀವಿ. ಇಬ್ರಾಹಿಂ ಅವರನ್ನು ಉಚ್ಚಾಟನೆ ಮಾಡಿಲ್ಲ. ಕುಮಾರಸ್ವಾಮಿ ಜೊತೆಗೆ ಕೆಲವು ಪದಾಧಿಕಾರಿಗಳ ನೇಮಕ ಮಾಡುತ್ತೇವೆ. ಮುಖಂಡರ ಜೊತೆ ಚರ್ಚೆ ಮಾಡಿ ಇನ್ನು ಮೂರು ದಿನಗಳ ಒಳಗೆ ಮಾಹಿತಿ ನೀಡುತ್ತೇವೆ' ಎಂದರು.
ಸಿ.ಎಂ. ಇಬ್ರಾಹಿಂ ವಾಗ್ದಾಳಿ
ಜೆಡಿಎಸ್ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳ ವಿಸರ್ಜನೆ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ಸಿ.ಎಂ ಇಬ್ರಾಹಿಂ ವಾಗ್ದಾಳಿ ಮಾಡಿದರು. ಹಂಗಾಮಿ ಅಧ್ಯಕ್ಷರು ಅಂತ ಯಾವ ಆಧಾರದಲ್ಲಿ ಮಾಡಿದ್ದೀರಿ? ದೇವರು ಮತ್ತು ಜನ ನನ್ನ ಕೈಹಿಡಿಯುತ್ತಾರೆ. ಎಲ್ಲವನ್ನೂ ಹೊರಗೆ ತಂದರೆ ಒಳ್ಲೆಯದಲ್ಲ, ವಿಸರ್ಜನೆ ತಪ್ಪು, ಆದೇಶ ವಾಪಸ್ ಪಡೆದು ಸಭೆ ಕರೆಯಿರಿ. ನಾನು ಹೋಗದೇ ಇದ್ದರೆ ಚನ್ನಪಟ್ಟಣದಲ್ಲಿ ಹೆಚ್‌ಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರಾ? ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು? ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಾನು ಹಾಸನ, ಮಂಡ್ಯ, ಹೊಳೆನರಸೀಪುರಕ್ಕೆ ಹೋಗಿ ಸಭೆ ಮಾಡುತ್ತೇನೆ ಎಂದರು.












Click it and Unblock the Notifications