ಮೈಸೂರು ಉಳಿಸಿಕೊಂಡು, ತುಮಕೂರು ಬಿಟ್ಟುಕೊಟ್ಟ ಕಾಂಗ್ರೆಸ್!
Recommended Video

ಬೆಂಗಳೂರು, ಮಾರ್ಚ್ 13 : ಕಾಂಗ್ರೆಸ್-ಜೆಡಿಎಸ್ ನಡುವಿನ ಸೀಟು ಹಂಚಿಕೆ ಅಂತಿಮವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್‌ಗೆ 20, ಜೆಡಿಎಸ್ 8 ಸ್ಥಾನಗಳು ಹಂಚಿಕೆಯಾಗಿವೆ.
ಕೊಚ್ಚಿನ್‌ನಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬುಧವಾರ ಸಂಜೆ ಸಭೆ ನಡೆಸಿ ಸೀಟು ಹಂಚಿಕೆ ಅಂತಿಮಗೊಳಿಸಿದ್ದಾರೆ. ಇದರಿಂದಾಗಿ ಹಲವು ದಿನದಿಂದ ಇದ್ದ ಗೊಂದಲ ಬಗೆಹರಿದಿದೆ.
ಭಾರಿ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗಿದ್ದ ಮೈಸೂರು-ಕೊಡಗು ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದ್ದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ತವರು ಕ್ಷೇತ್ರ ತುಮಕೂರು ಜೆಡಿಎಸ್ ಪಾಲಾಗಿದೆ.
ಕಾಂಗ್ರೆಸ್-ಜೆಡಿಎಸ್ ನಡುವಿನ ಸೀಟು ಹಂಚಿಕೆ ಬಗ್ಗೆ ಮಾ.16ರಂದು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೆಂಗಳೂರು ಉತ್ತರದಿಂದ ಕಣಕ್ಕಿಳಿಯುವುದು ಖಚಿತವಾಗಿದೆ....

ಜೆಡಿಎಸ್‌ಗೆ ಸಿಕ್ಕ 8 ಸೀಟುಗಳು
ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು 8 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಶಿವಮೊಗ್ಗ, ಉತ್ತರ ಕನ್ನಡ, ವಿಜಯಪುರ, ತುಮಕೂರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ.

ಮೈಸೂರು ಉಳಿಸಿಕೊಂಡ ಸಿದ್ದರಾಮಯ್ಯ
ಮೈಸೂರು-ಕೊಡಗು ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ ಎಂದು ಹಠ ಹಿಡಿದಿದ್ದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ. ಯಾವುದೇ ಕಾರಣಕ್ಕೂ ಮೈಸೂರನ್ನು ಜೆಡಿಎಸ್‌ಗೆ ನೀಡಬಾರದು ಎಂದು ಹೈಕಮಾಂಡ್ ಮುಂದೆ ಪ್ರಬಲ ವಾದವನ್ನು ಅವರು ಮಂಡಿಸಿದ್ದರು.

ಹಾಲಿ ಸಂಸದರ ಕ್ಷೇತ್ರ ಜೆಡಿಎಸ್‌ಗೆ
ತುಮಕೂರು ಕ್ಷೇತ್ರ ಕಾಂಗ್ರೆಸ್ ವಶದಲ್ಲಿತ್ತು. ಮುದ್ದಹನುಮೇಗೌಡ ಅವರು ಸಂಸದರಾಗಿದ್ದರು. ಜೆಡಿಎಸ್ ಪಟ್ಟುಹಿಡಿದು ತುಮಕೂರು ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ತವರು ಜಿಲ್ಲೆ ತುಮಕೂರು ಜೆಡಿಎಸ್ ಪಾಲಾಗಿದೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್‌ಗೆ
ಹಾಲಿ ಕಾಂಗ್ರೆಸ್ ಸಂಸದರು ಇರುವ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ನೀಡುವಂತೆ ಜೆಡಿಎಸ್ ಪಟ್ಟು ಹಿಡಿದಿತ್ತು. ಆದರೆ, ಸಂಸದ ವೀರಪ್ಪ ಮೊಯ್ಲಿ ಅವರು ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪಿರಲಿಲ್ಲ. ಅಂತಿಮವಾಗಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ವಶದಲ್ಲಿಯೇ ಉಳಿದಿದೆ.

ಉಡುಪಿ-ಚಿಕ್ಕಮಗಳೂರು ಜೆಡಿಎಸ್‌ಗೆ
ಅಚ್ಚರಿ ಎಂಬಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಕ್ಷೇತ್ರ ಬಿಜೆಪಿ ವಶದಲ್ಲಿದ್ದು ಶೋಭಾ ಕರಂದ್ಲಾಜೆ ಅವರು ಸಂಸದರು. ಜೆಡಿಎಸ್‌ನಿಂದ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications