ಜೆಡಿಎಸ್-ಬಿಜೆಪಿ ಸರ್ಕಾರ: ಅಚ್ಚರಿ ಹೇಳಿಕೆ ನೀಡಿದ ಹೆಚ್ ಡಿ ಕುಮಾರಸ್ವಾಮಿ
ರಾಮನಗರ, ಅಕ್ಟೋಬರ್ 30: ಮುಂದೊಂದು ದಿನ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ರಾಮನಗರ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.
ಚನ್ನಪಟ್ಟಣ ಚುನಾವಣಾ ಪ್ರಚಾರ ನಡೆಸಿದ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಈ ಸರ್ಕಾರದ ಆಡಳಿತದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಈ ಭೂಮಿಗಳನ್ನು ಲೂಟಿ ಹೊಡೆಯುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುತ್ತೇವೆ ಎಂದು ಕೆಲವರು ಹೊರಟಿದ್ದಾರೆ. ನಾವೆಲ್ಲಾ ಈ ನೆಲದ ಮಕ್ಕಳು, ಮಣ್ಣು ನಂಬಿಕೊಂಡು ಜೀವನ ಮಾಡುವವರು. ಮಣ್ಣು ಮಾರಿಕೊಂಡು ಬದುಕುವ ಜನ ನಾವಲ್ಲ ಎಂದರು.

ಚನ್ನಪಟ್ಟಣ ಹಾಗೂ ರಾಮನಗರಗಳನ್ನು ಅವಳಿ ನಗರಗಳನ್ನಾಗಿ ಹುಬ್ಬಳ್ಳಿ - ಧಾರವಾಡದಂತೆ ಅಭಿವೃದ್ಧಿ ಮಾಡಲಾಗುವುದು. ಚನ್ನಪಟ್ಟಣ ಮಾದರಿ ವಿಧಾನಸಭೆ ಕ್ಷೇತ್ರವನ್ನಾಗಿ ರೂಪಿಸಿ ಶೈಕ್ಷಣಿಕ, ಆರ್ಥಿಕ ಹಾಗೂ ಕೈಗಾರಿಕಾ ಹಬ್ ಅನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ ಉಪ ಚುನಾವಣೆಗೆ ಕುಮಾರಸ್ವಾಮಿ ಹಣ ತಂದು ಸುರಿಯುತ್ತಿದ್ದಾರೆ ಎಂದು ಆರೋಪ ಮಾಡಿರುವ ಸಚಿವ ಭೈರತಿ ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ವಾಲ್ಮೀಕಿ ನಿಗಮದಲ್ಲಿದ್ದ ಪರಿಶಿಷ್ಟರ ಹಣವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಉಕ್ಕು ಮಂತ್ರಿಯಾಗಿ ಪುತ್ರನ ಎಲೆಕ್ಷನ್ ಗೆ ಕುಮಾರಸ್ವಾಮಿ ಅವರು ಹಣ ಸುರಿಯುತ್ತಾರೆ ಎಂದು ಅವರು ಹೇಳಿದ್ದಾರೆ, ಅಲ್ಲವೇ? ಸುರೇಶ್ ಅವರಿಗೆ ನಾನು ಹೇಳಲು ಬಯಸುತ್ತೇನೆ, ಉಕ್ಕು ಮಂತ್ರಿಯಾಗಿ ನಾನು ದುಡ್ಡು ಪ್ರೀಂಟ್ ಮಾಡ್ತಿನಾ? ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
ಕಳೆದ ಲೋಕಸಭೆ ಚುನಾವಣೆ ವೇಳೆ ವಾಲ್ಮಿಕಿ ನಿಗಮದಲ್ಲಿ ₹82 ಕೋಟಿ ಲೂಟಿ ಮಾಡಿದ್ದಾರೆ. ಅದೇ ಹಣದಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆ ಮಾಡಿದ್ದಾರೆ. ತೆಲಂಗಾಣ ಚುನಾವಣೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನುವುದು ಕೂಡ ಗೊತ್ತಿದೆ. ಯಾವ ನೈತಿಕತೆ ಇಟ್ಟುಕೊಂಡು ಹಣದ ಬಗ್ಗೆ ಮಾತನಾಡುತ್ತಾರೆ. ಅಪಪ್ರಚಾರ ಮಾಡೋದು ಕಾಂಗ್ರೆಸ್‌ನವರ ಚಾಳಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಚನ್ನಪಟ್ಟಣದಲ್ಲಿ ಮತದಾರರು ಜೆಡಿಎಸ್ ಬಗ್ಗೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ಬಿಜೆಪಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಕಾಂಗ್ರೆಸ್ ನಾಯಕರು ಏನೇ ಕುತಂತ್ರ ಮಾಡಿದರೂ ಮತದಾರರು ಎನ್‌ಡಿಎ ಕೂಟಕ್ಕೆ ಮತ ಹಾಕುತ್ತಾರೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ವಲಸೆಗಾರರಿಗೆ ಬಿಟ್ಟು ಕೆಲಸಗಾರರಿಗೆ ಓಟ್ ಕೊಡಿ ಎಂದು ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆದುಕೊಂಡು ಬಂದು ಈಗ ವಯನಾಡು ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವರಿಗೂ ವಯನಾಡಿಗೆ ಏನು ಸಂಬಂಧ? ರಾಮನಗರ ನನ್ನ ಕರ್ಮಭೂಮಿ, ನನಗೆ ರಾಜಕೀಯ ಜನ್ಮ ಕೊಟ್ಟ ಪುಣ್ಯಭೂಮಿ. ನಾನು ಮಣ್ಣಾಗುವುದೇ ರಾಮನಗರದ ಕೇತಿಗಾನಹಳ್ಳಿಯ ಮಣ್ಣಿನಲ್ಲಿ. ನಾನು ಹುಟ್ಟಿದ್ದು ಹಾಸನದಲ್ಲಿ, ನನ್ನ ಸಂಪೂರ್ಣವಾದ ಬದುಕು ರಾಮನಗರ ಜಿಲ್ಲೆಯಲ್ಲಿ ಎಂದು ಹೇಳಿದರು.












Click it and Unblock the Notifications