ಸೆ.26ರ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದ ಜೆಡಿಎಸ್
ಬೆಂಗಳೂರು, ಸೆಪ್ಟೆಂಬರ್ 23 : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಸೆ.26ರ ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಶಾಸಕಾಂಗ ಪಕ್ಷದ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, 'ಕಳಸಾ - ಬಂಡೂರಿ ವಿಚಾರದಲ್ಲಿ ನರೇಂದ್ರ ಮೋದಿ ಅವರು ಔದಾರ್ಯ ತೋರಬೇಕು. ಕರ್ನಾಟಕಕ್ಕೆ ಬೇಕಿರುವ 7 ಟಿಎಂಸಿ ನೀರಿಗೆ ಕಾಲಹರಣ ಮಾಡದೆ ಒಪ್ಪಿಗೆ ನೀಡಬೇಕು' ಎಂದು ಒತ್ತಾಯಿಸಿದರು. [ಸೆ.26ರ ಬಂದ್ ಗೆ ಸಾವಿರ ಸಂಘಟನೆಗಳ ಬೆಂಬಲ]

ಗೋವಾ ಮುಖ್ಯಮಂತ್ರಿ ಭೇಟಿ : 'ಕಳಸಾ-ಬಂಡೂರಿ ನಾಲಾ ಯೋಜನೆ ಕುರಿತು ಮಾತುಕತೆ ನಡೆಸಲು ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನಸ್ಸಿಲ್ಲ. ಆದ್ದರಿಂದ, ನಾವೇ ಗೋವಾ ಮುಖ್ಯಮಂತ್ರಿಯವರನ್ನು ಭೇಟಿ ಮಾಡುತ್ತೇವೆ. ಇದಕ್ಕಾಗಿ ಅವರ ಸಮಯ ಕೋರುತ್ತೇವೆ' ಎಂದು ಕುಮಾರಸ್ವಾಮಿ ಹೇಳಿದರು. [ಏನಿದು ಕಳಸಾ-ಬಂಡೂರಿ ಯೋಜನೆ?]
'ಈ ಯೋಜನೆ ಕುರಿತು ವಿವರವಾದ ಚರ್ಚೆ ನಡೆಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯಾವಕಾಶ ಕೋರಿದ್ದಾರೆ. ಸಮಯ ನಿಗದಿ ಮಾಡಿದರೆ, ರಾಜ್ಯದ ಮುಖಂಡರೂ ದೇವೇಗೌಡರ ಜೊತೆ ತೆರಳುವರು' ಎಂದು ತಿಳಿಸಿದರು.
ಸೆ.26ರಂದು ಬಂದ್ : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡ ಒಕ್ಕೂಟ ಸೆ.26ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸಾವಿರಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ.












Click it and Unblock the Notifications