ಜಂತಕಲ್ ಗಣಿಗಾರಿಕೆ ಪ್ರಕರಣ : ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್
ಬೆಂಗಳೂರು, ಅಕ್ಟೋಬರ್ 10 : ಜಂತಕಲ್ ಗಣಿಗಾರಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 14ಕ್ಕೆ ಮುಂದೂಡಿದೆ.
ನಿಗದಿಯಂತೆ ಜಂತಕಲ್ ಗಣಿಗಾರಿಕೆ ಪ್ರರಕಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಗುರುವಾರದಿಂದ ನಡೆಯಬೇಕಿತ್ತು. ಆದರೆ, ಕಂಪ್ಯೂಟರ್ ದೋಷದ ಕಾರಣ ತಾತ್ಕಾಲಿಕವಾಗಿ ವಿಚಾರಣೆಯನ್ನು ಮುಂದೂಡಲಾಗಿದೆ.
ಜಂತಕಲ್ ಗಣಿಗಾರಿಕೆ ಪ್ರಕರಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರವೇನು? ಎಂದು ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಲೋಕಾಯುಕ್ತ ಎಸ್‌ಐಟಿ ತಂಡ ತನಿಖೆ ನಡೆಸಿ, ಕೋರ್ಟ್‌ಗೆ ವರದಿ ನೀಡಿದೆ.

ಏನಿದು ಪ್ರಕರಣ? : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೆ ಕಂದವಾಡಿ ಗ್ರಾಮದಲ್ಲಿ21/8/2007 ರಿಂದ 14/2/2009ರ ತನಕ ನಡೆದಿದ್ದ ಗಣಿಗಾರಿಕೆ ಪ್ರಕರಣವಿದು. ಕುಮಾರಸ್ವಾಮಿ ಅವರು ಲಂಚ ಪಡೆದು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ ಎಂಬುದು ಆರೋಪ.
ಗಣಿಗಾರಿಕೆಗೆ ಅನುಮತಿ ನೀಡಿದ್ದಕ್ಕಾಗಿ ಜಂತಕಲ್ ಮೈನಿಂಗ್ ಕಂಪನಿ ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಿಂದ ಅನಿತಾ ಕುಮಾರಸ್ವಾಮಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಜಂತಕಲ್ ಮೈನಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣ ರದ್ದುಗೊಳಿಸುವಂತೆ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಪ್ರಕರಣದ ರದ್ದು ಮಾಡಿತ್ತು.
ದೂರುದಾರರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಪ್ರಕರಣದ ಮರು ವಿಚಾರಣೆ ನಡೆಸಲು ಸೂಚನೆ ನೀಡಿತ್ತು. ಆದ್ದರಿಂದ, ಲೋಕಾಯುಕ್ತ ಎಸ್‌ಐಟಿ ತನಿಖೆ ನಡೆಸಿ ವರದಿ ನೀಡಿದೆ. ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ.












Click it and Unblock the Notifications