Jan Ki Baat Pre Poll Survey: ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ
ಬೆಂಗಳೂರು, ಏಪ್ರಿಲ್ 14; ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆಯೇ? ಎಂದು ಕಾದು ನೋಡಬೇಕಿದೆ. ವಿವಿಧ ಸಂಸ್ಥೆಗಳು ರಾಜ್ಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಕೈಗೊಂಡಿವೆ. ರಾಜ್ಯದ ಚುನಾವಣಾ ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ.
ಶುಕ್ರವಾರ ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ವರದಿಯನ್ನು ಸುವರ್ಣ ನ್ಯೂಸ್ ಬಿಡುಗಡೆ ಮಾಡಿದೆ. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 98-109 ಕ್ಷೇತ್ರಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಕಾಂಗ್ರೆಸ್ 89-97 ಸೀಟು ಗೆಲ್ಲಲಿದೆ. ಒಟ್ಟಾರೆ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ.

ಸಮೀಕ್ಷೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಅಧಿಕ ಸೀಟು ಬರಲಿದೆ? ಎಂದು ಸಮೀಕ್ಷೆ ಮಾಡಲಾಗಿದೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಟ್ಟು 26 ವಿಧಾನಸಭಾ ಕ್ಷೇತ್ರಗಳು ಮಧ್ಯ ಕರ್ನಾಟಕದಲ್ಲಿ ಬರಲಿವೆ. ಇವುಗಳ ಪೈಕಿ ಬಿಜೆಪಿ 13, ಕಾಂಗ್ರೆಸ್ 12 ಸ್ಥಾನಗಳಲ್ಲಿ ಜಯಗಳಿಸಲಿವೆ. ಜೆಡಿಎಸ್ ಪಕ್ಷ 1 ಸ್ಥಾನದಲ್ಲಿ ಮಾತ್ರ ಗೆಲ್ಲಲಿದೆ.
ಒಟ್ಟಾರೆ ಸಮೀಕ್ಷೆ ವರದಿಯ ಅಂಕಿ ಅಂಶಗಳು ಹೀಗಿವೆ. ಬಿಜೆಪಿ 98-109, ಕಾಂಗ್ರೆಸ್ 89-97, ಜೆಡಿಎಸ್ 25-29 ಮತ್ತು ಇತರೆ 0-1 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಹೇಳಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅತಿ ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದರೂ ಯಾರಿಗೂ ಸ್ಪಷ್ಟವಾದ ಬಹುಮತ ಸಿಗುವುದಿಲ್ಲ. ರಾಜ್ಯದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 113.
ಚುನಾವಣೆಯಲ್ಲಿ ಬಿಜೆಪಿ ಶೇ 37-39ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ 38-40ರಷ್ಟು ಮತ ಪಡೆಯಲಿದೆ. ಜೆಡಿಎಸ್ ಪಕ್ಷ 16-18ರಷ್ಟು ಮತಗಳನ್ನು ಪಡೆದರೆ, ಇತರರು ಶೇ 5-7ರಷ್ಟು ಮತಗಳನ್ನು ಪಡೆಯಲಿದ್ದಾರೆ.

2018ರ ಚುನಾವಣೆ; ಮಧ್ಯ ಕರ್ನಾಟಕದ 26 ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ
ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಭದ್ರಾವತಿ ಕಾಂಗ್ರೆಸ್ ಪಾಲಾಗಿತ್ತು 6 ಬಿಜೆಪಿಗೆ ಸಿಕ್ಕಿತ್ತು. ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಶೃಂಗೇರಿ ಕಾಂಗ್ರೆಸ್ ಗೆದ್ದುಕೊಂಡಿತ್ತು, ಉಳಿದ 4 ಬಿಜೆಪಿ ಗೆಲುವು ಕಂಡಿತ್ತು. ದಾವಣಗೆರೆಯ ಜಿಲ್ಲೆಯಲ್ಲಿ ಹರಿಹರ ಬಿಟ್ಟು ಉಳಿದ 5 ಕ್ಷೇತ್ರ ಬಿಜೆಪಿಗೆ ಒಲಿದಿತ್ತು. ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 2 ಸ್ಥಾನ ಗೆದ್ದಿತ್ತು.
ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಪ್ರಭಾವ ಹೆಚ್ಚಿದೆ ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ. ಶಿವಮೊಗ್ಗ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಷ್ಟು ಪ್ರಭಾವ ಅವರು ಹೊಂದಿದ್ದಾರೆ. ಆದರೆ ಈ ಬಾರಿ ಅವರು ಮತ್ತು ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜನ್ ಕಿ ಬಾತ್ ಸಮೀಕ್ಷೆಯ ವರದಿ ಗಮನಿಸಿದರೆ ಇದು ಚುನಾವಣೆ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತಿಲ್ಲ.
ಮಧ್ಯ ಕರ್ನಾಟಕದಲ್ಲಿ ದಾವಣಗೆರೆಯೂ ಸೇರುತ್ತದೆ. ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್‌ನ ಲಂಚ ಪ್ರಕರಣದ ಆರೋಪಿಯಾಗಿ ಲೋಕಾಯುಕ್ತರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಅವರಿಗೆ ಟಿಕೆಟ್ ಕೈ ತಪ್ಪಿದೆ, ಶಿವಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಭಾಗದಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಪ್ರಭಾವ ಕೆಲಸ ಮಾಡಲಿದೆಯೇ? ಕಾದು ನೋಡಬೇಕು. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಅದು ಸಹ ಚುನಾವಣೆಯಲ್ಲಿ ತನ್ನದೇ ರೀತಿಯಲ್ಲಿ ಪ್ರಭಾವ ಬೀರುವುದು ಖಚಿತ.












Click it and Unblock the Notifications