ಸಿದ್ದ'ರಾಮ'ಯ್ಯನ ಹನುಮಂತ ಜಮೀರ್ ಅಹ್ಮದ್, ಅತೃಪ್ತರ ಹಿಡಿದಿಟ್ಟುಕೊಂಡಿದ್ದಾರೆ
ಬೆಂಗಳೂರು, ಸೆಪ್ಟೆಂಬರ್ 22: ಸಿದ್ದರಾಮಯ್ಯ ಅವರ ಕರೆಗೆ ಓಗೊಟ್ಟು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದು ಈಗ ಮಂತ್ರಿಯೂ ಆಗಿರುವ ಜಮೀರ್ ಅಹ್ಮದ್ ಅವರು ಸರ್ಕಾರ ಉಳಿಸಲು ಟೊಂಕ ಕಟ್ಟಿರುವ ಸಿದ್ದರಾಮಯ್ಯ ಅವರಿಗೆ ರಾಮ ಭಂಟ ಹನುಮಂತನಂತೆ ಸಾಥ್ ನೀಡುತ್ತಿದ್ದಾರೆ.
ಹೌದು, ಇತ್ತಕಡೆ ಬಿಜೆಪಿ ಒಬ್ಬೊಬ್ಬರೇ ಶಾಸಕರನ್ನು ಸೆಳೆಯಲು ವಾಟ್ಸ್‌ಆಪ್ ಕಾಲ್‌ಗಳು, ಅಜ್ಞಾತ ಸ್ಥಳಗಳಲ್ಲಿ ಭೇಟಿಯಂತಹಾ ತಂತ್ರಗಳಿಗೆ ಮೊರೆ ಹೋಗಿದ್ದರೆ. ಅತೃಪ್ತರನ್ನು ಕಾಂಗ್ರೆಸ್‌ನಲ್ಲೇ ಉಳಿಸಲು ಸಿದ್ದರಾಮಯ್ಯ ಅವರು ಜಮೀರ್ ಅವರನ್ನು ಬಾಣವಾಗಿ ಅಖಾಡಕ್ಕೆ ಬಿಟ್ಟಿದ್ದಾರೆ.
ಅತೃಪ್ತ ಶಾಸಕರನ್ನೆಲ್ಲಾ ನಿನ್ನೆಯೇ ಭೇಟಿ ಮಾಡಿರುವ ಜಮೀರ್ ಅಹ್ಮದ್ ಅವರು, ಸಿದ್ದರಾಮಯ್ಯ ಅವರು ತಮಗೆ ನೀಡಿದ್ದ ಸಂದೇಶವನ್ನು ಸ್ಪಷ್ಟವಾಗಿ ದಾಟಿಸಿದ್ದಾರೆ. ಅಷ್ಟೆ ಅಲ್ಲದೆ ಆನಂದ್ ಸಿಂಗ್ ಹಾಗೂ ಶಾಸಕ ಶಂಕರ್ ಅವರನ್ನು ಸಿದ್ದರಾಮಯ್ಯ ಅವರ ಮುಂದೆ ಕರೆದುತಂದು ಚರ್ಚೆಗೆ ಬಿಟ್ಟಿದ್ದಾರೆ.

ಆನಂದ್ ಸಿಂಗ್ ಅವರನ್ನು ಕರೆತಂದ ಜಮೀರ್
ಆನಂದ್ ಸಿಂಗ್ ಅವರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಅವರು, ನೀವು ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳಿ ಹೋಗಬಾರದು, ನಿಮ್ಮನ್ನು ಸೋಲಿಸಲು ಬಿಜೆಪಿ ಎಷ್ಟೆಲ್ಲಾ ತಂತ್ರಗಳನ್ನು ಹೂಡಿತು ಆದರೆ ನಾವು ಗೆಲ್ಲಿಸಿದ್ದೇವೆ ಅಲ್ಲಿಗೆ ಹೋದರೆ ಮತ್ತೆ ಅದೇ ಹೀನ ರಾಜಕಾರಣದಲ್ಲಿ ಸಿಲುಕುತ್ತೀರಿ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಎಂಬಿ ಪಾಟೀಲ್ ಭೇಟಿ ಮಾಡಿರುವ ಜಮೀರ್
ಇತ್ತೀಚೆಗಷ್ಟೆ ಜಮೀರ್ ಅವರು ಪ್ರಮುಖ ಅತೃಪ್ತ ಶಾಸಕರಲ್ಲಿ ಒಬ್ಬರಾಗಿರುವ ಎಂ.ಬಿ.ಪಾಟೀಲ್ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಬಂಡಾಯ ಏಳಬಾರದೆಂದು, ಉಳಿದ ಅತೃಪ್ತರಿಗೆ ಬೆಂಬಲ ನೀಡಬಾರದೆಂಬ ಸಿದ್ದರಾಮಯ್ಯ ಅವರ ಸಂದೇಶವನ್ನು ತಲುಪಿಸಿದ್ದಾರೆ.

ಶಂಕರ್ ಅವರನ್ನೂ ಭೇಟಿ ಮಾಡಿರುವ ಜಮೀರ್
ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಶಾಸಕ ಕಮ್ ಅರಣ್ಯ ಸಚಿವ ಶಂಕರ್ ಅವರನ್ನೂ ಜಮೀರ್ ಭೇಟಿಯಾಗಿದ್ದಾರೆ. ಅವರೂ ಸಹ ಪಕ್ಷ ಬಿಡುವ ಸೂಚನೆ ಸಿಕ್ಕ ಕಾರಣ ಅವರನ್ನೂ ಸಿದ್ದರಾಮಯ್ಯ ಅವರ ಅಣತಿಯಂತೆ ಜಮೀರ್ ಭೇಟಿ ಆಗಿದ್ದಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕದ ಅತೃಪ್ತರ ಭೇಟಿ?
ಉಳಿದಂತೆ ಬಿ.ಸಿ.ಪಾಟೀಲ್ ಸೇರಿ ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರನ್ನು ಜಮೀರ್ ನಿನ್ನೆಯೇ ಭೇಟಿಯಾಗಿದ್ದು ಸಿದ್ದರಾಮಯ್ಯ ಪರ ಮಾತನಾಡಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈಜೋಡಿಸಬಾರದು ಎಂದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮ ವರದಿಯನ್ನೂ ನೀಡಿದ್ದಾರೆ.












Click it and Unblock the Notifications