ಬಿಜೆಪಿಗೆ ಜಗನ್ನಾಥ್ ರಾವ್ ಜೋಶಿ ಕೊಡುಗೆ ಅಪಾರ: ಡಿ. ಎಸ್. ಅರುಣ್
ಬೆಂಗಳೂರು, ಜುಲೈ 15; "ಜನಸಂಘದ ಬೆಳವಣಿಗೆ ಹಾಗೂ ಬಿಜೆಪಿಯ ಆರಂಭದಲ್ಲಿ ಜಗನ್ನಾಥ ರಾವ್ ನೀಡಿದ ಕೊಡುಗೆ ಅಪಾರ" ಎಂದು ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಗನ್ನಾಥ ರಾವ್ ಜೋಶಿ 31ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಜ್ಯ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಕರ್ನಾಟಕ ಕೇಸರಿ ಎಂದೇ ಪ್ರಖ್ಯಾತಿಯಾಗಿದ್ದ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ. ಎಸ್. ಅರುಣ್, "ಬಿಜೆಪಿ ಪಕ್ಷಕ್ಕಾಗಿ ಅವರು ಮಾಡಿದ ತ್ಯಾಗವು ಇಂದಿಗೂ ಶಾಶ್ವತವಾಗಿ ಉಳಿದಿದೆ. ಜಗನ್ನಾಥ ರಾವ್ ಜೋಶಿ, ಬಾವುರಾವ್ ದೇಶಪಾಂಡೆ, ಸಂಘದ ಹಲವು ಪ್ರಮುಖರಿಂದ ನನಗೆ ಸಂಸ್ಕಾರ ಲಭಿಸಿದೆ" ಎಂದರು.
"ಜಗನ್ನಾಥ ರಾವ್ ಜೋಶಿ ಪಕ್ಷದ ಬೆಳವಣಿಗೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಕರ್ನಾಟಕದವರಾದರೂ ಮಧ್ಯಪ್ರದೇಶದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಪಕ್ಷ ಸಂಘಟನೆ ಬಲಪಡಿಸಲು ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದರು" ಎಂದು ಡಿ. ಎಸ್. ಅರುಣ್ ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಸುಬ್ಬನರಸಿಂಹ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.












Click it and Unblock the Notifications