Shettar vs Joshi: ಧಾರವಾಡದಲ್ಲಿ ಶೆಟ್ಟರ್-ಜೋಶಿ ಬಿಗ್ ಫೈಟ್? ಕಾಂಗ್ರೆಸ್‌ನಿಂದ ಲಿಂಗಾಯತ ಅಸ್ತ್ರ ಹೂಡಲು ಪ್ಲಾನ್
ಬೆಂಗಳೂರು, ಡಿಸೆಂಬರ್ 21: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿದ್ದು, ಸರ್ವ ಪಕ್ಷಗಳು ಅಗತ್ಯ ತಯಾರಿ ಆರಂಭಿಸಿವೆ. ಇತ್ತ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಜಿದ್ದಾ ಜಿದ್ದಿ ಏರ್ಪಡುವ ಸಾಧ್ಯತೆ ಇದೆ. ಕಾರಣ ಇಲ್ಲಿನ ಲಿಂಗಾಯತ ಮತಗಳ ಮೇಲೆ ಕಾಂಗ್ರೆಸ್ ಕಣ್ಣು ಬಿದಿದ್ದೆ. ಹೀಗಾಗಿಯೇ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಜಗದೀಶ್ ಶೆಟ್ಟರ್ ಲೋಕಸಭಾ ಚುನಾವಣೆ 2024ರಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈಗಾಗಲೇ ರಾಜ್ಯ ಕಾಂಗ್ರೆಸ್ ದೆಹಲಿ ಹೈಕಮಾಂಡ್ ಗೆ ಧಾರವಾಡ ಲೋಕಸಭೆ ಟಿಕೆಟ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಒಬ್ಬರ ಹೆಸರು ಮಾತ್ರವೇ ತಲುಪಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದೆ.

ಇದೆಲ್ಲ ಬೆಳವಣಿಗೆ ನೋಡಿದರೆ ಉತ್ತರ ಕರ್ನಾಟಕದ ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಲು ತಯಾರಾಗಿದೆ. ಕೈ ಪಡೆ ಜಗದೀಶ್ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು 'ಲಿಂಗಾಯತ ಅಸ್ತ್ರ' ಪ್ರಯೋಗಿಸಲು ಮುಂದಾಗಿದೆ. ಹೀಗಾಗಿಯೇ ಇಲ್ಲಿ ಜೋಶಿ ಮತ್ತು ಶೆಟ್ಟರ್ ಮಧ್ಯೆ ಬಿಗ್ ಫೈಟ್ ಏರ್ಪಡಲಿದೆ.
ಲಿಂಗಾಯತ ವರ್ಚಸ್ ಮೇಲೆ ಕಾಂಗ್ರೆಸ್ ಕಣ್ಣು
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನಿಂದ ನಿಂತು ಸೋಲು ಕಂಡಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ ಒಲಿದಿತ್ತು. ಉತ್ತರ ಕರ್ನಾಟಕದ ಲಿಂಗಾಯತರ ಮೇಲೆ ಪ್ರಭಾವ ಬೀರಿದ್ದ ಶೆಟ್ಟರ್ ಸೋಲುಂಡಿದ್ದರು.
ಹೀಗಿದ್ದರು ಸಹ ಲಿಂಗಾಯತ ನಾಯಕರು ಎಂಬ ವರ್ಚಸ್ಸನ್ನು ಲೋಕಸಭೆಯಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ರೂಪಿಸಿಕೊಂಡಿದೆ. ಈ ಮೂಲಕವೇ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕೆ ಇಳಿಸಿ ಬಿಜೆಪಿಗೆ ಸವಾಲೊಡ್ಡಲಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ತೆರಳಿದ್ದಾಗಲೂ ಇದೇ ಮಾತುಕತೆ ನಡೆದಿತ್ತು.

ಶೆಟ್ಟರ್‌ಗೆ ಟಿಕೆಟ್ ಕೊಡಲು ಕಾಂಗ್ರೆಸ್ ನಿರ್ಧಾರ
ಧಾರವಾಡ ಲೋಕಸಭಾ ಚುನಾವಣೆ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅವರು ಆಕಾಂಕ್ಷಿ ಎಂದು ಭಾವಿಸಿದ್ದೇವೆ. ಸ್ಥಳೀಯರ ಅಭಿಪ್ರಾಯ ಕೇಳಿಕೊಂಡು ಪಕ್ಷವು ನಿರ್ಧರಿಸಲಿದೆ. ಅವರು ಒಪ್ಪಿದರೆ ಟಿಕೆಟ್ ನೀಡಲಾಗುವುದು ಎಂದು ಶೆಟ್ಟರ್ ಮನೆಯಲ್ಲಿಯೇ ಸಿದ್ದರಾಮಯ್ಯ ಹೇಳಿದ್ದರು.
ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್ ಅವರು ನಾನು ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ತಿಳಿಸಿದ್ದರು. ಆದರೆ ಪಟ್ಟು ಸಡಿಲಿಸದ ಕಾಂಗ್ರೆಸ್ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರ ನಾಯಕನನ್ನೇ ನಿಲ್ಲಿಸಿ ಬಿಜೆಪಿ ಸೋಲುಣಿಸುವ ತವಕದಲ್ಲಿದೆ. ಹೀಗಾಗಿಯೇ ಈ ಬಾರಿಯ ಧಾರವಾಡ ಟಿಕೆಟ್ ಶೆಟ್ಟರ್‌ಗೆ ನೀಡಲಾಗುವುದು ಎಂಬ ಮಾತುಗಳು ಕೇಳಿ ಬಂದಿವೆ.
ಕಾಂಗ್ರೆಸ್ ಮನವೊಲಿಕೆಗೆ ಜಗ್ಗುವರೆ ಶೆಟ್ಟರ್?
ಇದರ ಜೊತೆ ಜೊತೆಗೆ ಜಗದೀಶ್ ಶೆಟ್ಟರ್ ಅವರ ಮನವೊಲಿಕೆಯ ಯತ್ನಗಳು, ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಲಾಗುತ್ತಿದೆ. ಈ ಬಗ್ಗೆ ಪಕ್ಷದೊಳಗೆ ಚರ್ಚೆಗಳು ನಡೆಯುತ್ತಿವೆ. ಶೀಘ್ರವೇ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಶೆಟ್ಟರ್ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications