Jagadish Shettar: ಟೆಂಗಿನಕಾಯಿ ಎದುರು ಚೂರಾದ ಶೆಟ್ಟರ್ ಅಧಿಕಾರದಾಸೆ
ಬೆಂಗಳೂರು, ಮೇ 14: ಪಕ್ಷ ಸಿದ್ಧಾಂತ ಮರೆತು ಬಿಜೆಪಿ ತೊರೆದ ಕಾಂಗ್ರೆಸ್ ಸೇರಿದ್ದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸೋತಿದ್ದಾರೆ. ಈ ಮೂಲಕ ಜನಪ್ರತಿನಿಧಿಯೊಬ್ಬರಿಗೆ ಸಿದ್ಧಾಂತ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಮತದಾರರು ಸಾಬೀತು ಮಾಡಿದ್ದಾರೆ.
ಅಧಿಕಾರದ ಆಸೆ ನನಗಿಲ್ಲ ಎನ್ನುತ್ತಲೇ ಸದರಿ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ ಅಸ್ತ್ರ ಹಿಡಿದು ಬಿಜೆಪಿಗೆ ಒಳಹೊಡೆತ ಕೊಟ್ಟು ಗೆಲ್ಲಬೇಕು ಎಂಬುದು ಜಗದೀಶ್ ಶೆಟ್ಟರ್ ಆಲೋಚನೆಯಾಗಿತ್ತು. ಆದರೆ ಅವರ ಪಕ್ಷವಿರೋಧಿ ನಡೆಗೆ, ಅಧಿಕಾರದಾಸೆಗೆ ಜನರು ಬುದ್ಧಿ ಕಲಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಕೇಂದ್ರದಲ್ಲಿ ನಾಯಕರು ಯಾರೇ ಬರಲಿ, ಯಾರೇ ಹೋಗಲಿ ಇಲ್ಲಿ ಬಿಜೆಪಿಯೇ ಗಟ್ಟಿ ಎಂಬುದನ್ನು ಸಾರಿದ್ದಾರೆ.

ಬಿಜೆಪಿಯಲ್ಲಿದ್ದಾಗ ಶಾಸಕ ಸ್ಥಾನ, ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನ ಹೀಗೆ ಬಹುವಿಧದ ಅಧಿಕಾರ ಅನುಭವಿಸಿದರೂ ಸಹ ಹೈಕಮಾಂಡ್ ಸೂಚನೆ ಧಿಕ್ಕರಿಸಿದ್ದ ಜಗದೀಶ್ ಶೆಟ್ಟರ್ ಟಿಕೆಟ್ ಸಿಕ್ಕಿಲ್ಲವೆಂದು ಪಕ್ಷ ತೊರೆದರು. ಕಾಂಗ್ರೆಸ್ ಸೇರಿದ ನಂತರ ಚುನಾವಣೆ ಹಿತದೃಷ್ಟಿ ಮತ್ತು ತಮ್ಮ ಅನುಕೂಲಕ್ಕಾಗಿ ಬಿಜೆಪಿ ಮೇಲೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು.
ಗೆಲುವಿಗೆ ಶೆಟ್ಟರ್ ವಿಫಲಯತ್ನ
ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದೆಲ್ಲ ಆರೋಪಿಸಿದರು. ಈ ಮೂಲಕ ಲಿಂಗಾಯತ ಮತಗಳನ್ನು ಗುಂಪುಗೂಡಿಸುವ ವಿಫಲಯತ್ನ ನಡೆಸಿದರು. ಕಾಂಗ್ರೆಸ್ ಟಿಕೆಟ್ ಪಡೆದು ಸ್ವ ಕ್ಷೇಕತ್ರದಿಂದ ಗೆಲ್ಲಲೇಬೇಕೆಂದುಕೊಂಡರು. ಆದರೆ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರಿಗೆ ಜನ ಬಹುಪರಾಕ್ ಹೇಳಿದರು. ಇದರಿಂದ ಸುಮಾರು ಆರು ಭಾರಿ ಗೆದ್ದ ನಾಯಕ ಶೆಟ್ಟರ್‌ಗೆ ಮುಖಭಂಗವಾಗಿದೆ.

ಸುಮಾರು ಮೂರು ದಶಕಗಳಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಸಿದ್ಧಾಂತ ಮರೆತು ಕಾಂಗ್ರೆಸ್ ಪಕ್ಷ ಸೇರಿದ್ದರು. ತದನಂತರದ ಅವರ ಆರೋಪಗಳ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರು ಎಲ್ಲ ಸ್ಥಾನ ಪಡೆದು ಇದೀಗ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂಬ ಅಸ್ತ್ರ ಚುನಾವಣೆಯಲ್ಲಿ ಕೆಲಸ ಮಾಡಿತು.
ಶೆಟ್ಟರ್ ಸೋಲಿಸುವಲ್ಲಿ ಬಿಎಸ್‌ವೈ-ಜೋಶಿ ಯಶಸ್ವಿ
ಲಿಂಗಾಯತ ಸಮುದಾಯ ಯಾವೊಂದು ಮತಗಳು ಬಿಜೆಪಿ ಬಿಟ್ಟು ಹೋಗದಂತೆ ಕೇಂದ್ರದ ಸೂಚನೆ ಮೇರೆಗೆ ಖುದ್ದು ಸಮುದಾಯದ ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪನವರೇ ಅಖಾಡಕ್ಕಿಳಿದರು. ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಸಾಥ್ ನೀಡಿದರು. ಅವರು ಶೆಟ್ಟರ್ ಸೋಲಿಸಲು ಟೊಂಕ ಕಟ್ಟಿ ನಿಂತಿದ್ದರು. ಈ ಸಂಬಂಧ ಉತ್ತರ ಕರ್ನಾಟಕದ ಹಲವೆಡೆ ಓಡಾಡುವ ಮೂಲಕ ಮಹೇಶ್ ತೆಂಗಿನಕಾಯಿಗೆ ಬರಬೇಕಿದ್ದ ಮತಗಳು ಅತ್ತಿತ್ತ ವಾಲದಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು ಎಂದು ವಿಶ್ಲೇಷಿಸಲಾಗಿದೆ.
2023ರ ಚುನಾವಣೆಯಲ್ಲಿ ಮಹೇಶ್ ಟೆಂಗಿನಕಾಯಿ 95064 ಸಾವಿರ ಮತಗಳಿಂದ ಗೆದ್ದರೆ, ಜಗದೀಶ್ ಶೆಟ್ಟರ್ ಅವರು ಬರೊಬ್ಬರಿ 34,289 ಮತಗಳಿಂದ ಸೋಲುಂಡಿದ್ದಾರೆ. ಕಳೆದ ಬಾರ 2018ರಲ್ಲಿ ಇದೇ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಶೆಟ್ಟರ್ 75,794 ಮತ ಪಡೆಯುವ ಮೂಲಕ ಕಾಂಗ್ರೆಸ್‌ನಿಂದ 21,306 ಮತಗಳ ಅಂತರದಿಂದ ಗೆದ್ದಿದ್ದರು.












Click it and Unblock the Notifications