ಬಿಎಲ್ ಸಂತೋಷ್, ಜೋಶಿ, ಕಟೀಲ್ ಮಸಲತ್ತನ್ನು ಬಿಚ್ಚಿಟ್ಟ ಜಗದೀಶ್ ಶೆಟ್ಟರ್- ಬಿಜೆಪಿ ಒಳಮರ್ಮ ಹೊರಹಾಕಿದ ಮಾಜಿ ಸಿಎಂ
ಬೆಂಗಳೂರು, ಏಪ್ರಿಲ್ 18: ನನಗೆ ಟಿಕೆಟ್ ತಪ್ಪಿಸಿದ್ದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಎಂಬ ಸ್ಪೋಟಕ ಮಾಹಿತಿಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಹಿರಂಗ ಪಡಿಸಿದ್ದಾರೆ. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಜಗದೀಶ್ ಶೆಟರ್ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಜಗದೀಶ್ ಶೆಟ್ಟರ್ ಬಿಎಲ್ ಸಂತೋಷ್ ವಿರುದ್ಧ ಹರಿಹಾಯ್ದರು. ನನಗೆ ಟಿಕೆಟ್ ತಪ್ಪಿಸಿದ್ದೇ ಬಿಎಲ್ ಸಂತೋಷ್ ಎಂದು ಹೇಳಿದರು.

ತಮ್ಮ ಮಾನಸ ಪುತ್ರ ಮಹೇಶ್ ತೆಂಗನಕಾಯಿಗೆ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲು ಬಿಎಲ್ ಸಂತೋಷ್ ಅವರು ನನಗೆ ಟಿಕೆಟ್ ತಪ್ಪಿಸಿದರು ಎಂದು ಶೆಟ್ಟರ್ ತಿಳಿಸಿದರು.
'ಬಿಜೆಪಿ ನನ್ನ ಮನೆಯಾಗಿತ್ತು. ಮೊದಲಿನಿಂದಲೂ ಪಕ್ಷವನ್ನು ಕಟ್ಟಲು ಶ್ರಮಿಸಿದವರಲ್ಲಿ ನಾನೂ ಒಬ್ಬನಾಗಿದ್ದರಿಂದ ನಾನು ಎಂದಿಗೂ ತೊರೆಯುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ಪಕ್ಷಕ್ಕೆ ಸೇರ್ಪಡೆಗೊಂಡವರು ಸೇರಿದಂತೆ ಮೂವರು ನಾಯಕರು ನನ್ನನ್ನು ಹೊರಹಾಕಲು ಸಂಚು ರೂಪಿಸಿದರು' ಎಂಬ ಗಂಭೀರ ಆರೋಪವನ್ನು ಶೆಟ್ಟರ್ ಮಾಡಿದ್ದಾರೆ.

'ನಾನು ಯಾವಾಗಲೂ ಪಕ್ಷಕ್ಕಾಗಿ ದುಡಿದಿದ್ದೇನೆ. ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನೇತೃತ್ವದಲ್ಲಿ ಉತ್ತರ ಕರ್ನಾಟಕದಲ್ಲಿ ಪಕ್ಷ ಕಟ್ಟಿದ್ದೇನೆ. ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಿದ್ದೇನೆ. ನನಗೆ ಉಪಚುನಾವಣೆ ಜವಾಬ್ದಾರಿಯನ್ನು ನೀಡಲಾಗಿದ್ದು, ಉತ್ತಮವಾಗಿ ನಿಭಾಯಿಸಿದ್ದೇನೆ' ಎಂದು ಶೆಟ್ಟರ್ ಹೇಳಿದರು.
ಹೈಕಮಾಂಡ್ ಜೊತೆಗಿನ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಿದ ಶೆಟ್ಟರ್, ನನ್ನನ್ನು ಚಿಕ್ಕ ಹುಡುಗನಂತೆ ನಡೆಸಿಕೊಳ್ಳಲಾಗಿದೆ. ನನಗೆ ಅವಮಾನ ಮಾಡಲಾಗಿದೆ ಎಂದು ತಿಳಿಸಿದರು.
'ಧರ್ಮೇಂದ್ರ ಪ್ರಧಾನ್ ನನಗೆ ಕರೆ ಮಾಡಿ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿದರು. ಫಾರಂ ಕಳುಹಿಸುತ್ತೇನೆ ಎಂದು ಹೇಳಿ ಸಹಿ ಮಾಡುವಂತೆ ಸೂಚಿಸಿದರು. ಅವರು ನನ್ನನ್ನು ಚಿಕ್ಕ ಹುಡುಗನಂತೆ ನಡೆಸಿಕೊಂಡರು. ನಾನು ಆರು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ' ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
'ಕೋರ್ ಕಮಿಟಿ ಕಳುಹಿಸಿದ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಏನಾಯಿತೋ ಗೊತ್ತಿಲ್ಲ. ಅವರು ಗೌರವಪೂರ್ವಕವಾಗಿ ನನಗೆ ಬೇರೆ ಸ್ಥಾನವನ್ನು ಮೊದಲೇ ನೀಡಿದ್ದರೆ, ನಾನು ಅದನ್ನು ಸ್ವೀಕರಿಸುತ್ತಿದ್ದೆ. ಟಿಕೆಟ್ ಕೈ ತಪ್ಪಲು ಬಿಎಲ್ ಸಂತೋಷ್ ಪ್ರಮುಖ ಕಾರಣ. ಕೆಲವರಿಗೆ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ. ಒಂದು ಸ್ಥಾನಕ್ಕೆ ತೊಂದರೆ ಕೊಡಲು ಪಕ್ಷವನ್ನು ನಾಶ ಮಾಡಿದ್ದೀರಿ' ಎಂದು ಶೆಟ್ಟರ್ ಹೇಳಿದರು.
ಕೃಷ್ಣರಾಜ ಕ್ಷೇತ್ರದಿಂದ ಹಾಲಿ ಶಾಸಕ ಎಸ್‌ಎ ರಾಮದಾಸ್‌ಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಸಂತೋಷ್ ಕಾರಣ ಎಂದು ಶೆಟ್ಟರ್ ಆರೋಪಿಸಿದರು.
ರಾಮದಾಸ್ ಸ್ಪರ್ಧಿಸಿದರೆ ಗೆಲ್ಲುತ್ತಾರೆ. ಆದರೆ, ಕೃಷ್ಣರಾಜ ಟಿಕೆಟ್ ಅನ್ನು ಸಂತೋಷ್ ಅವರ ಆಪ್ತ ಶ್ರೀವತ್ಸ ಅವರಿಗೆ ನೀಡಲಾಗಿದೆ ಎಂದು ಶೆಟ್ಟರ್ ಹೇಳಿದರು.
ಇದೇ ವೇಳೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ವಿರುದ್ಧವೂ ಜಗದೀಶ್ ಶೆಟ್ಟರ್ ಹರಿಹಾಯ್ದರು.












Click it and Unblock the Notifications