ಯಡಿಯೂರಪ್ಪ ರಾಜಕೀಯ ನಿವೃತ್ತಿ ಬೆನ್ನಲ್ಲೇ ನನಗೆ ವಿಶ್ರಾಂತಿ ಬೇಕು, ಇದು ನನ್ನ ಕೊನೆ ಚುನಾವಣೆ ಎಂದ ಎಚ್‌ಡಿಕೆ
2023 ರ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳವನ್ನು ಅಧಿಕಾರಕ್ಕೆ ತಂದೆ ತರುತ್ತೇನೆ ಎಂಬ ಭರವಸೆಯಲ್ಲಿ 'ಪಂಚರತ್ನ ರಥಯಾತ್ರೆ' ಅಭಿಯಾನದ ಮೂಲಕ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ. 28: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, 2023ರ ವಿಧಾನಸಭೆ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
"ನಾನು 2028 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಏಕೆಂದರೆ ನಾನು ರಾಜಕೀಯದಿಂದ ದಣಿದಿದ್ದೇನೆ. ನನಗೆ ವಿಶ್ರಾಂತಿಯ ಅಗತ್ಯವಿದೆ. ಆದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸುತ್ತೇನೆ" ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದರ ಜೊತೆಗೆ ಅವರು ಸಕ್ರಿಯ ರಾಜಕಾರಣವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ ಆಯೋಜಿಸಿದ್ದ ಬಮೂಲ್ ಉತ್ಸವದಲ್ಲಿ ಈ ಘೋಷಣೆ ಮಾಡಿದ್ದಾರೆ.

2018 ರಲ್ಲಿ, ಎಚ್.ಡಿ. ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ ಉಪಚುನಾವಣೆಯಲ್ಲಿ ತನ್ನ ಸ್ಥಾನವನ್ನು ಪತ್ನಿ ಅನಿತಾ ಕುಮಾರಸ್ವಾಮಿಗಾಗಿ ಹಿಂದಿನ ಕ್ಷೇತ್ರವನ್ನು ತೊರೆದಿದ್ದರು. ಮುಂಬರುವ ಚುನಾವಣೆಯಲ್ಲಿ ಅವರ ಮಗ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಅಂದರೆ ತಂದೆ ಮತ್ತು ಮಗ ಇಬ್ಬರೂ ಪರಸ್ಪರ ಅಕ್ಕಪಕ್ಕದ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಪದೇ ಪದೇ ಮಾಹಿತಿ ನೀಡುವ ಅವರು, "ನಾನು ಈಗಾಗಲೇ ರಾಜ್ಯಾದ್ಯಂತ ಒಂಟಿಯಾಗಿ ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ. ನನಗೂ ಎರಡು ಬಾರಿ ಆಪರೇಷನ್ ಆಗಿದೆ. ನಾನು ರೈತರ ಉಳಿವಿಗಾಗಿ ಕೆಲಸ ಮಾಡುತ್ತಿದ್ದೇನೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ನಾವು ಅಭ್ಯರ್ಥಿಯನ್ನ ಘೋಷಣೆ ಮಾಡುವವರೆಗೂ ಕಾರ್ಯಕರ್ತರು ಧೃತಿಗೆಡಬಾರದು" ಎಂದು ಹಾಸನದ ಟಿಕೆಟ್ ಹಂಚಿಕೆ ವಿಷಯದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಮಾತನಾಡಿದ್ದಾರೆ.

63 ವರ್ಷ ವಯಸ್ಸಿನ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕ, ರಾಜಕಾರಣಿ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕಿರಿಯ ಪುತ್ರರಾಗಿ ಹೆಸರುವಾಸಿಯಾಗಿದ್ದು. 2023 ರ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳವನ್ನು ಅಧಿಕಾರಕ್ಕೆ ತಂದೆ ತರುತ್ತೇನೆ ಎಂಬ ಭರವಸೆಯಲ್ಲಿ 'ಪಂಚರತ್ನ ರಥಯಾತ್ರೆ' ಅಭಿಯಾನದ ಮೂಲಕ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ.












Click it and Unblock the Notifications