Israel: ಶತ್ರುಗಳ ಶರಣಾಗತಿ ನೋಡುವುದೇ ಗುರಿ, ಶಾಂತಿ ಮಾತು ಬೇಡ ಎಂದ ಇಸ್ರೇಲ್!
ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ದೇಶಗಳ ನಡುವೆ ನಡೆಯುತ್ತಿರುವ ಕಿತ್ತಾಟ ಬಲು ಜೋರಾಗಿ ಸಾವಿರಾರು ಜನರು ಹೆಣವಾಗಿದ್ದಾರೆ. ಹೀಗಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಇಸ್ರೇಲ್‌ನ ವಿರುದ್ಧ ಮಧ್ಯಪ್ರಾಚ್ಯದ ದೇಶಗಳೆಲ್ಲಾ ಒಂದಾಗಿ ಯುದ್ಧ ಸಾರುವ ಭಯ ಕೂಡ ಆವರಿಸಿದೆ. ಪರಿಸ್ಥಿತಿ ಹೀಗಿದ್ದಾಗ ಅಮೆರಿಕ & ಫ್ರಾನ್ಸ್ ಸೇರಿ ಒಂದು ಐಡಿಯಾ ಮಾಡಿದ್ದವು. ಅದು ಏನಪ್ಪಾ ಅಂದ್ರೆ, ಇಸ್ರೇಲ್ ಸೇನೆ ಜೊತೆಗೆ ಚರ್ಚೆ ಮಾಡಿ ಯುದ್ಧವನ್ನು ನಿಲ್ಲಿಸಬೇಕು. ಈ ಮೂಲಕ ಕದನ ವಿರಾಮ ಘೋಷಣೆ ಮಾಡಬೇಕು ಎಂಬ ಪ್ಲಾನ್ ಇತ್ತು.
ಇಸ್ರೇಲ್ ಈಗಾಗಲೇ ಗಾಜಾ ಪಟ್ಟಿ ವಿರುದ್ಧ ಕಾದಾಟ ಶುರು ಮಾಡಿದ್ದು, ಸುಮಾರು ಒಂದು ವರ್ಷದಿಂದ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಲೆಬನಾನ್ ಮತ್ತು ಸಿರಿಯಾ ವಿರುದ್ಧ ಕೂಡ ಇಸ್ರೇಲ್ ದಾಳಿ ಮಾಡುತ್ತಿದೆ. ಹೀಗಾಗಿ ಇದು ಎಲ್ಲೆಲ್ಲಿಗೋ ಹೋಗಿ ಮುಟ್ಟುತ್ತಿದೆ. ಮುಂದೊಂದು ದಿನ ಇರಾನ್ ಕೂಡ ಯುದ್ಧದ ಅಖಾಡಕ್ಕೆ ಎಂಟ್ರಿನ ಕೊಟ್ಟು, ಇಸ್ರೇಲ್ ಜೊತೆ ಬಡಿದಾಡುತ್ತೆ ಎಂಬ ಭಯ ಕಾಡುತ್ತಿದೆ. ಇದೇ ಕಾರಣಕ್ಕೆ ಇಸ್ರೇಲ್‌ಗೆ ಬುದ್ಧಿ ಹೇಳಿ ಕದನ ವಿರಾಮ ಘೋಷಣೆ ಮಾಡೋಣ ಎಂಬ ಪ್ಲಾನ್ ಮಾಡಿತ್ತು ಅಮೆರಿಕ & ಫ್ರಾನ್ಸ್. ಆದರೆ ಅದೆಲ್ಲಾ ಹೊಳೆಯಲ್ಲಿ ಉಣಸೆ ಹಣ್ಣು ತೊಳೆದಂತೆ ಆಗಿ ಹೋಗಿದೆ!

ಇಸ್ರೇಲ್ ಕಡ್ಡಿ ತುಂಡು ಮಾಡಿದಂತೆ...
ಇಸ್ರೇಲ್ ಈಗ ತೊಡೆತಟ್ಟಿ ನಿಂತಿದ್ದು, ಏನೇ ಆದರೂ ಶತ್ರುಗಳು ಉಳಿಯಬಾರದು. ನಮಗೆ ಗೆಲುವು ಸಿಗಬೇಕು ಅಂತಾ ಡಿಸೈಡ್ ಆಗಿಬಿಟ್ಟಿದೆ. ಇದೇ ಕಾರಣಕ್ಕೆ ಲೆಬನಾನ್ & ಸಿರಿಯಾದ ಮೇಲೆ ನಡೆಸುತ್ತಿರುವ ದಾಳಿ ನಿಲ್ಲಿಸಲು ಇಸ್ರೇಲ್ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಇದೀಗ ಹಿಜ್ಬುಲ್ಲಾ ನಾಯಕರು ಇಸ್ರೇಲ್‌ಗೆ ಶರಣಾಗಬೆಕು, ಹಿಜ್ಬುಲ್ಲಾ ಇಸ್ರೇಲ್ ಎದುರು ಮಂಡಿಯೂರಿ ಶರಣಾಗದೆ ಇದ್ದರೆ ನಾವು ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಕಡ್ಡಿ ತುಂಡು ಮಾಡಿದ ರೀತಿ ಹೇಳಿಬಿಟ್ಟಿದೆ. ಆದರೆ ಇಸ್ರೇಲ್‌ನ ಇದೇ ನಿರ್ಧಾರ ಇದೀಗ ಅಮೆರಿಕ & ಫ್ರಾನ್ಸ್‌ಗೆ ಭಾರಿ ದೊಡ್ಡ ತಲೆನೋವು ತಂದಿದೆ ಎಂದು ಹೇಳಲಾಗುತ್ತಿದೆ.
21 ದಿನಗಳ ಕದನ ವಿರಾಮ?
ಇತ್ತೀಚೆಗೆ ಫ್ರಾನ್ಸ್ ವಿದೇಶಾಂಗ ಸಚಿವರು ಕದನ ವಿರಾಮದ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಅಂದಹಾಗೆ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ಘೋರ ಕಾಳಗಕ್ಕೆ ಬ್ರೇಕ್ ಹಾಕಲು, ಈ ಮೂಲಕ ತಾತ್ಕಾಲಿಕವಾಗಿ ಶಾಂತಿ ಮೂಡಿಸಲು ಫ್ರಾನ್ಸ್ ಹಾಗೂ ಅಮೆರಿಕ ಈ ಸಮಯದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದವು.
ಈ ಬಗ್ಗೆ ಮಾತನಾಡಿ ಮಾಹಿತಿ ಕೂಡ ತಿಳಿಸಿದ್ದ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರಟ್, ಇಸ್ರೇಲ್ & ಹಿಜ್ಬುಲ್ಲಾ ನಡುವೆ 21 ದಿನಗಳ ಕದನ ವಿರಾಮ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದರು. ಆದರೆ ಈಗ ನೋಡಿದರೆ ಇಸ್ರೇಲ್ ಈ ಆಹ್ವಾನ ತಿರಸ್ಕರಿಸಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಸದ್ಯ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಯುದ್ಧ ಪೀಡಿತ ಲೆಬನಾನ್ ತೊರೆಯುವಂತೆ ತಮ್ಮ ತಮ್ಮ ದೇಶಗಳ ಪ್ರಜೆಗಳಿಗೆ ಸೂಚನೆ ನೀಡಿವೆ. ಹೀಗಾಗಿ ಯುದ್ಧ ಮತ್ತಷ್ಟು ಭೀಕರವಾಗುವ ಮುನ್ಸೂಚನೆ ಎಂಬ ಮಾತು ಕೂಡ ಕೇಳಿಬಂದಿದೆ.












Click it and Unblock the Notifications