ವಿ ಸೋಮಣ್ಣಗೆ ಕಾಂಗ್ರೆಸ್ ಸೇರ್ಪಡೆ ಫಿಕ್ಸ್? ಯಾವ ಕ್ಷೇತ್ರದಿಂದ ಸ್ಪರ್ಧೆ ಗೊತ್ತಾ?
ಬೆಂಗಳೂರು,ನವೆಂಬರ್ 13: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧಾರದಂತೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ವಿ ಸೋಮಣ್ಣ ಹೀನಾಯವಾಗಿ ಸೋಲು ಅನುಭವಿಸಿದ್ದು, ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟಿದ್ರು. ಆದರೆ, ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡದ ಬಳಿಕೆ ಬಿಜೆಪಿ ಹಿರಿಯ ನಾಯಕರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಪಕ್ಷ ತ್ಯಾಗದ ಕುರಿತು ಚರ್ಚೆಯಾಗುತ್ತಿದೆ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಸೋಮಣ್ಣ ಅವರಿಗೆ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಕಾಂಗ್ರೆಸ್ ಸೇರ್ತಾರಾ ಅನ್ನೋ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸಂದರ್ಭದಲ್ಲಿಯೂ ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಅದು ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ವಿ ಸೋಮಣ್ಣ ಇರುವ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಿಂದ ವೈರಲ್ ಆಗಿತ್ತು.

ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನಲೆ ಬೇಸರಗೊಂಡಿರುವ ಸೋಮಣ್ಣ ವಿಜಯೇಂದ್ರೆ ಹೆಸರು ಘೋಷಣೆ ಬಳಿಕ ಮೌನಕ್ಕೆ ಜಾರಿರುವ ನವೆಂಬರ್ 17ರಂದು ಸುದ್ದಿಗೋಷ್ಠಿ ನಡೆಸೋದಾಗಿ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಆಪರೇಷನ್ ಹಸ್ತದಡಿ ವಿ ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ 20 ಕ್ಷೇತ್ರಗಳನ್ನ ಗೆಲ್ಲಲು ಹಲವು ತಂತ್ರಗಾರಿಕೆಯನ್ನ ನಡೆಸಿರುವ ಕಾಂಗ್ರೆಸ್ ನಾಯಕರು, ಬೆಂಗಳೂರು-ದಕ್ಷಿಣ ಲೋಕಸಭೆಯನ್ನು ಬಲಪಡಿಸಲು ವಿ ಸೋಮಣ್ಣ ಅವರನ್ನು ನಿಯೋಜಿಸಲು ಪ್ಲಾನ್ ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹಳೇ ಮೈಸೂರು ಭಾಗದಲ್ಲಿ ವೀರಶೈವ ಲಿಂಗಾಯತ ನಾಯಕರ ಕೊರತೆಯನ್ನ ಕಾಂಗ್ರೆಸ್ ಎದುರಿಸುತ್ತಿದೆ. ವಿ.ಸೋಮಣ್ಣ ಅವರನ್ನು ಕರೆತಂದು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ತುಮಕೂರಿನ ವೀರಶೈವ-ಲಿಂಗಾಯತ ಮುಖಂಡರು, ಮಠಮಾನ್ಯಗಳ ಜೊತೆ ಉತ್ತಮ ಒಡನಾಟದಲ್ಲಿರೋ ವಿ.ಸೋಮಣ್ಣ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ.

ಇನ್ನೂ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ. ಹಾಲಿ ಸಂಸದ ಜಿಎಸ್ ಬಸವರಾಜ್ ಅವರಿಗೆ ಕೊಕ್ ನೀಡುವ ಸಾಧ್ಯತೆಗಳಿವೆ. ಇನ್ನೂ ಮೈತ್ರಿ ಸೂತ್ರದಡಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ರೆ ಒಕ್ಕಲಿಗ ಅಥವಾ ಹಿಂದುಳಿದ ಅಭ್ಯರ್ಥಿ ಕಣಕ್ಕಿಳಿಸಲು ದಳಪತಿಗಳು ಮುಂದಾಗಬಹುದು ಎಂಬ ಲೆಕ್ಕಾಚಾರವನ್ನ ಕಾಂಗ್ರೆಸ್ ನಾಯಕರು ಹಾಕಿಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ವಿ.ಸೋಮಣ್ಣಗೆ ಟಿಕೆಟ್ ನೀಡಿದರೆ ಪಕ್ಷಾತೀತವಾಗಿ ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡುವ ಸಾಧ್ಯತೆ ಹೆಚ್ಚು. ಸಾಂಪ್ರದಾಯಿಕ ಮತಗಳ ಜೊತೆ ಈ ಎಲ್ಲಾ ಅಂಶಗಳು ಸೇರಿಸಿದ್ರೆ ಸೋಮಣ್ಣ ಗೆಲುವು ಸುಲಭವಾಗಲಿದೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಆಗಿದೆ.












Click it and Unblock the Notifications