ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ಜೊತೆ ಮೊಟ್ಟೆ: ಶೀಘ್ರದಲ್ಲೇ ನಿರ್ಧಾರ ಸಾಧ್ಯತೆ
ಬೆಂಗಳೂರು, ಜೂನ್ 15: ರಾಜ್ಯದಲ್ಲಿ ಮುಚ್ಚುವ ಹಂತ ತಲುಪಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮರು ಜೀವ ಬಂದಂತಾಗಿದೆ. ಇಂದಿರಾ ಕ್ಯಾಂಟೀನ್ ಮತ್ತೆ ಆರಂಭಿಸಲು ಸರ್ಕಾರ ಎಲ್ಲಾ ನೆರವು ನೀಡುತ್ತಿದೆ. ಕಡಿಮೆ ದರದಲ್ಲಿ ಪ್ರತಿನಿತ್ಯ ಸಾವಿರಾರು ಕೂಲಿಕಾರ್ಮಿಕರು, ಶ್ರಮಿಕರು, ಬಡವರು ಊಟ ಮಾಡುತ್ತಿದ್ದರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನದ ಕೊರತೆಯಿಂದ ಮುಚ್ಚುವ ತಲುಪಿದ್ದವು.
ಸದ್ಯ ಇಂದಿರಾ ಕ್ಯಾಂಟೀನ್‌ಗಳಿಗೆ ಮರುಜೀವ ನೀಡಿರುವುದು ಮಾತ್ರವಲ್ಲದೆ, ಬೆಂಗಳೂರಿನಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಕೂಡ ಕಾಂಗ್ರೆಸ್ ಚಿಂತಿಸುತ್ತಿದೆ. ಇದರ ಜೊತೆಗೆ ಊಟದ ಮೆನುವಿನಲ್ಲಿ ಕೂಡ ಬದಲಾವಣೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಊಟದ ಜೊತೆ ಮೊಟ್ಟೆ ನೀಡುವ ಬೇಡಿಕೆ ಕೂಡ ಇದ್ದು, ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಪೌಷ್ಠಿಕಾಂಶ ನೀಡಲು ಮೊಟ್ಟೆ ಉತ್ತಮ ಆಯ್ಕೆ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಕೂಡ ಮೊಟ್ಟೆ ನೀಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ವಾರದಲ್ಲಿ ಮೂರು ದಿನ ಕೋಳಿ ಮೊಟ್ಟೆ ನೀಡುವಂತೆ ಸಿದ್ದರಾಮಯ್ಯ ಅವರ ಬಳಿ ಬೇಡಿಕೆ ಇಡಲಾಗಿದೆ.
ಕಡಿಮೆ ದರದಲ್ಲಿ ಮೊಟ್ಟೆ ವಿತರಣೆ
ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿಯ ಮೆನು ಬದಲಾವಣೆ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊಸ ಫುಡ್‌ಮೆನು ಹೇಗಿರಬೇಕು ಎಂದು ನಿರ್ಧರಿಸಲಿದ್ದಾರೆ. ಅಪೌಷ್ಠಿಕತೆ ಹೋಗಲಾಡಿಸಲು ಕಡಿಮೆ ದರದಲ್ಲಿ ಮೊಟ್ಟೆ ವಿತರಣೆ ಮಾಡುವುದು ಉತ್ತಮ ಎಂದು ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ವಾಜೀದ್ ಪತ್ರ ಬರೆದು ಮನವಿ ಮಾಡಿದ್ದಾರೆ. ಅತಿ ಶೀಘ್ರದಲ್ಲೇ ಊಟ-ತಿಂಡಿಯ ಮೆನು ಬದಲಾವಣೆ ಆಗಲಿದ್ದು, ಬಗೆ ಬಗೆಯ ತಿಂಡಿ ಮತ್ತು ಊಟ ಇಂದಿರಾ ಕ್ಯಾಂಟೀನ್‌ನಲ್ಲಿ ಲಭ್ಯವಾಗಲಿದೆ.
ಹೊಸದಾಗಿ 52 ಇಂದಿರಾ ಕ್ಯಾಂಟೀನ್
ಸಿದ್ದರಾಮಯ್ಯ ಅವರಿಗೆ 'ಅನ್ನರಾಮಯ್ಯ' ಎಂದು ಹೆಸರು ತಂದುಕೊಡುವಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಕೂಡ ಮುಖ್ಯವಾದುದ್ದಾಗಿದೆ. ಅವರ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ ಅನ್ನು ಮತ್ತಷ್ಟು ವಿಸ್ತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 198 ಇಂದಿರಾ ಕ್ಯಾಂಟೀನ್‌ಗಳಿದ್ದು ಇನ್ನೂ 52 ಇಂದಿರಾ ಕ್ಯಾಂಟೀನ್ ನಿರ್ಮಿಸುವ ಮೂಲಕ 250ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಹೈಟೆಕ್ ಮಾಡಿ ಉತ್ತಮ ಗುಣಮಟ್ಟದ ತಿಂಡ, ಊಟ ಪೂರೈಸಲು ಹೆಚ್ಚುವರಿಯಾಗಿ 15 ಕೋಟಿ ರುಪಾಯಿ ಹಣ ಬೇಕಾಗಿದ್ದು, ಅನುದಾನ ನೀಡುವಂತೆ ಬಿಬಿಎಂಪಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದೆ.












Click it and Unblock the Notifications