ಕನ್ನಡಿಗರ ರಕ್ಷಣೆ: ಸುಡಾನ್ ನೆಲದಲ್ಲಿ ಕಾರ್ಯಾಚರಣೆ
ಖರ್ಟೋಮ್, ಸುಡಾನ್: ಭಾರತದ ವಿವಿಧ ರಾಜ್ಯಗಳ ಪ್ರಜೆಗಳು ಸೇರಿದಂತೆ ಕನ್ನಡಿಗರ ರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಸುಡಾನ್ ನೆಲದಿಂದ 210ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಬಸ್ ವ್ಯವಸ್ಥೆ ಕಲ್ಪಿಸಿ ಎಲ್ಲರನ್ನೂ ಸುಡಾನ್ ಬಂದರು ನಗರದತ್ತ ರವಾನಿಸಲಾಗಿದೆ. ಅಲ್ಲಿಂದ ಸೇನಾ ಹಡಗಿನ ಮೂಲಕ ಭಾರತಕ್ಕೆ ಕರೆತರಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸುಡಾನ್‌ನಲ್ಲಿ ಭಾರತ ಮೂಲದ 3,000 ಪ್ರಜೆಗಳು ಸಿಲುಕಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಇವರನ್ನೆಲ್ಲಾ ಭಾರತಕ್ಕೆ ಕರೆತರಲು ಮನವಿ ಮಾಡಲಾಗಿತ್ತು. ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕಳೆದ ವಾರ ಪ್ರಧಾನಿ ಮೋದಿ ನೃತೃತ್ವದಲ್ಲಿ ಮಹತ್ವದ ಸಭೆ ನಡೆಸಿತ್ತು. ಇದಾದ ಬಳಿಕ ಭಾರತೀಯ ಪ್ರಜೆಗಳ ರಕ್ಷಣಾ ಕಾರ್ಯ ಕಳೆದ ಸೋಮವಾರದಿಂದ ಆರಂಭವಾಗಿ ಈಗಾಗಲೇ ನೂರಾರು ಭಾರತೀಯರನ್ನು ಸೌದಿ ಅರೇಬಿಯಾಗೆ ಕರೆತರಲಾಗಿದೆ. ಅಲ್ಲಿಂದ ಭಾರತಕ್ಕೆ ಕರೆತರಲು ಸಿದ್ಧತೆ ಕೈಗೊಳ್ಳಲಾಗಿದೆ. ಹಾಗಾದ್ರೆ ಸುಡಾನ್‌ನಲ್ಲಿ ಏನಾಗುತ್ತಿದೆ ಎಂಬುದನ್ನ ಮುಂದೆ ತಿಳಿಯೋಣ.

ಸೇನಾ ಸಂಘರ್ಷ ಶುರುವಾಗಿದ್ದು ಹೇಗೆ?
ಆಫ್ರಿಕಾದ ರಾಷ್ಟ್ರಗಳು ಅಂದರೆ ಬಡತನದ ಬೇಗೆಯಲ್ಲಿ ಬೆಂದು ಬಸವಳಿದ ದೇಶಗಳು ಅಂತಾನೆ ಅರ್ಥ. ಅದರಲ್ಲೂ ಈ ಸುಡಾನ್ ಇದೆಯಲ್ಲ, ಬಡ ರಾಷ್ಟ್ರಗಳಲ್ಲೇ ಅತ್ಯಂತ ಬಡ ರಾಷ್ಟ್ರ ಎನ್ನಬಹುದು. ಇಲ್ಲಿ ಒಂದು ಹೊತ್ತು ಅನ್ನ ಸಿಕ್ಕರೆ ಅದೇ ಅಲ್ಲಿನ ಬಹುತೇಕ ಜನರ ಸೌಭಾಗ್ಯ. ಪರಿಸ್ಥಿತಿ ಹೀಗಿರುವಾಗ ಪದೇಪದೆ ಇಲ್ಲಿ ಹಿಂಸಾಚಾರ ಭುಗಿಲೆದ್ದು, ಜನರು ತಮ್ಮ ತಮ್ಮ ನಡುವೆ ಬೆಂಕಿ ಹಚ್ಚಿಕೊಳ್ಳುತ್ತಾರೆ. ಅದೇ ರೀತಿ ಈಗ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಕಾಡ್ಗಿಚ್ಚೇ ಹೊತ್ತಿದೆ. ಹಾಗಾದರೆ ಭಾರತೀಯರು ಇಲ್ಲಿ ಸಿಲುಕಿದ್ದು ಹೇಗೆ?
ಹೊಟ್ಟೆಪಾಡಿಗೆ ಹೋದವರಿಗೆ ಸಂಕಷ್ಟ
ಬೇಟೆ ನಿಲ್ಲಿಸಿದ ಬಳಿಕ ಕಳೆದ ಹತ್ತಾರು ವರ್ಷಗಳಿಂದ ಬೇರೆ ಬೇರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದೆ ಹಕ್ಕಿಪಿಕ್ಕಿ ಜನಾಂಗ. ಅದರಲ್ಲೂ ಆಯುರ್ವೇದಿಕ್ ಔಷಧ ಮುಖ್ಯ ಉದ್ಯೋಗವಾಗಿದೆ. ಆದರೆ ಆಯುರ್ವೇದ ಔಷಧಗಳಿಗೆ ಭಾರತದಲ್ಲಿ ಅಷ್ಟಾಗಿ ಬೇಡಿಕೆ ಇಲ್ಲ. ಆಫ್ರಿಕಾ ಸೇರಿ ಹೊರ ದೇಶಗಳಲ್ಲಿ ಆಯುರ್ವೇದಕ್ಕೆ ಭಾರಿ ಬೇಡಿಕೆ ಇದೆ. ಹೀಗಾಗಿ ಹಕ್ಕಿಪಿಕ್ಕಿ ಜನಾಂಗದ ಜನ ಆಯುರ್ವೇದ ಔಷಧ ಮಾರಾಟವನ್ನೇ ತಮ್ಮ ಉದ್ಯೋಗ ಮಾಡಿಕೊಂಡಿದ್ದರು. ಹೀಗೆ ಔಷಧ ಮಾರಲು ಸುಡಾನ್‌ಗೆ ಹೋದವರು ನರಳುತ್ತಿದ್ದಾರೆ.
ಸೌದಿ ಮೂಲಕ ರಕ್ಷಣಾ ಕಾರ್ಯ
ಇನ್ನು ಭಾರತದ ರಕ್ಷಣಾ ಕಾರ್ಯಕ್ಕೆ ನಮ್ಮ ದೇಶದ ಮಿತ್ರ ಸೌದಿ ಅರೇಬಿಯಾ ನೆರವಾಗುತ್ತಿದೆ. ಹೇಗೆಂದರೆ ಕೆಂಪು ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿದೆ. ಹೀಗಾಗಿ ಸೌದಿ ಅರೇಬಿಯಾ ಮೂಲಕ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯ ನಮ್ಮ ಸೇನೆಯಿಂದ ಮುಂದುವರಿದಿದೆ. ಇನ್ನು ಈಗಾಗಲೇ ನೂರಾರು ಭಾರತೀಯರು ಸೌದಿ ತಲುಪಿ, ಅಲ್ಲಿಂದ ಭಾರತಕ್ಕೆ ಬರುತ್ತಿದ್ದಾರೆ. ಇವರ ಜೊತೆಗೆ ಕರ್ನಾಟಕ ಮೂಲದ ಪ್ರಜೆಗಳು ಕೂಡ ತಾಯ್ನಾಡನ್ನು ಸುರಕ್ಷಿತವಾಗಿ ಸೇರಲಿದ್ದಾರೆ.

ಯಾವಾಗ ಬೇಕಾದರು ಬಾಂಬ್ ಬೀಳುತ್ತೆ!
ಸುಡಾನ್ ಸೇನಾ ಸಂಘರ್ಷ ಎಷ್ಟು ಹುಚ್ಚೆದ್ದು ಹೋಗಿದೆ ಎಂದರೆ, ಅಲ್ಲಿರುವ ವಿದೇಶಿಯರನ್ನ ಅವರವರ ದೇಶಕ್ಕೆ ಹೋಗಲು ಬಿಡಬೇಕು ಎಂಬ ಕಾರಣಕ್ಕೆ 72 ಗಂಟೆಗಳ ಕಾಲ ಕದನ ವಿರಾಮ ಘೋಷಿಸಲಾಗಿದೆ. ಆದರೆ ಯಾವಾಗ ಬೇಕಾದ್ರು ಬಾಂಬ್‌ಗಳು ಬೀಳುವ ಭಯ ಶುರುವಾಗಿದೆ. ಸೇನಾಧಿಕಾರಿಗಳು ತಾವು ಘೋಷಿಸಿದ ಮಾತನ್ನೇ ಉಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ತಮ್ಮ ತಮ್ಮ ದೇಶಕ್ಕೆ ತೆರಳಲು ವಿದೇಶಿಯರು ಪರದಾಡುತ್ತಿದ್ದಾರೆ. ಈ ಪೈಕಿ ಭಾರತೀಯರ ರಕ್ಷಣೆ ಕೂಡ ಸವಲಾಗಿದ್ದು, ಸೇನೆ ಅಚ್ಚುಕಟ್ಟಾಗಿ ಈ ಕೆಲಸ ಮಾಡುತ್ತಿದೆ.
ಹಿಸಾಂಚಾರದ ತವರು ಸುಡಾನ್
ಈಗ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸೆ ಮೊದಲೇನಲ್ಲ. ಇಲ್ಲಿ ಪದೇಪದೆ ಹಿಂಸೆ ನಡೆಯುತ್ತಿದೆ. ಇದಕ್ಕೆ ಕಾರಣ ಹಲವು. ಆದರೆ 1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ.
ಹೀಗೆ ಒಮರ್ ಅಲ್-ಬಶೀರ್ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಲು 2019ರಲ್ಲಿ ಹಿಂಸೆ ಭುಗಿಲೆದ್ದಿತ್ತು. ಈ ದಂಗೆಯಲ್ಲಿ ಒಮರ್ ಅಲ್-ಬಶೀರ್ ಅಧಿಕಾರ ಬಿಟ್ಟುಕೊಟ್ಟಿದ್ದ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಸುಡಾನ್ ಮತ್ತೆ ಶಾಂತಿಯ ಜೀವನ ನಡೆಸಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಈಗ ಸೇನಾ ಸಂಘರ್ಷ ಶುರುವಾಗಿ, ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಬಡಿದಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಕೂಡ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.

ಭಾರತೀಯರನ್ನ ಹೊರಗೆ ಹಾಕಿದ್ರಾ?
ಸುಡಾನ್ ನಾಗರಿಕರ ಮೇಲೆ ಕೇಳಿಬಂದಿರುವ ಮತ್ತೊಂದು ಆರೋಪ ಏನೆಂದರೆ ಭಾರತದಿಂದ ಹೊಟ್ಟೆಪಾಡಿಗೆ ಸುಡಾನ್ ದೇಶ ತಲುಪಿದ್ದ ಭಾರತೀಯರನ್ನ ಮನೆಯಿಂದ ಹೊರ ಹಾಕಲಾಗಿದೆ ಎನ್ನಲಾಗಿದೆ. ಹೌದು ಸುಡಾನ್ ದೇಶದಲ್ಲಿ ಬಾಡಿಗೆ ಇರುವ ಭಾರತೀಯರನ್ನ ಅಲ್ಲಿನ ಮಾಲೀಕರು ಮನೆಯಿಂದ ಹೊರಗೆ ಕಳುಹಿಸುತ್ತಿರುವ ಆರೋಪ ಕೇಳಿಬಂದಿದೆ. ತೀವ್ರ ಹಿಂಸಾಚಾರ ನಡೆಯುತ್ತಿರುವ ಹೊತ್ತಲ್ಲೇ ಸುಡಾನ್ ಮಾಲೀಕರು ಈ ರೀತಿ ಭಾರತೀಯರನ್ನ ಏಕಾಏಕಿ ಮನೆಯಿಂದ ಹೊರಹಾಕಿ, ಅವರನ್ನ ಅತಂತ್ರ ಮಾಡಿದ್ದಾರೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಒಟ್ಟಾರೆ ಯಾರದ್ದೋ ತಪ್ಪಿಗೆ ಅಮಾಯಕರು ಹಿಂಸೆಯ ಕುಲುಮೆಯಲ್ಲಿ ನರಳುವಂತಾಗಿದೆ. ಈ ಹೊತ್ತಲ್ಲೇ ಭಾರತೀಯರ ರಕ್ಷಣೆ ಬಗ್ಗೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ, ಅಗತ್ಯ ಕ್ರಮ ಕೈಗೊಂಡಿದೆ. ಈಗಾಗಲೇ ಬಹುತೇಕ ಭಾರತೀಯರು ಸುರಕ್ಷಿತ ಜಾಗ ತಲುಪಿದ್ದು, ಇನ್ನೇನು ಒಂದೆರಡು ದಿನದಲ್ಲಿ ಸುಡಾನ್ ನೆಲದಲ್ಲಿ ನರಳುತ್ತಿದ್ದ ಭಾರತೀಯರು ತಾಯ್ನಾಡಿಗೆ ಬರುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಕದನ ವಿರಾಮ ಘೋಷಿಸಿರುವ ಸುಡಾನ್ ಸೇನಾಧಿಕಾರಿಗಳು, ಇನ್ನೊಂದು ಸುತ್ತು ಹೆಣಗಳ ರಾಶಿ ಹಾಕುವ ತವಕದಲ್ಲಿದ್ದಾರೆ.
ಈ ಮೂಲಕ ಮತ್ತೊಮ್ಮೆ ಆಫ್ರಿಕಾದ ಬಡ ರಾಷ್ಟ್ರ ಸುಡಾನ್ ವಿನಾಶದ ಅಂಚಿಗೆ ತಲುಪುತ್ತಿರುವ ಭಯ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಲೆನೋವು ತರಿಸುತ್ತಿದೆ. ಇಡೀ ಆಫ್ರಿಕಾದಲ್ಲೇ ಸುಡಾನ್ ಕಂಡಷ್ಟು ದಂಗೆಯನ್ನ ಬೇರೆ ಯಾವುದೇ ಆಫ್ರಿಕಾ ದೇಶ ಕಂಡಿಲ್ಲ ಎಂಬುದು ಗಮನಾರ್ಹ. ಮತ್ತೊಮ್ಮೆ ಇದೇ ರೀತಿ ಹಿಂಸಾಚಾರದಲ್ಲಿ ಸುಡಾನ್ ಬೀದಿಗೆ ಬರುವ ಆತಂಕ ಆವರಿಸಿದೆ. ಇದೇ ಕಾರಣಕ್ಕೆ ಹಿಂಸಾಚಾರ ನಿಲ್ಲಿಸಲು ಅಂತಾರಾಷ್ಟ್ರೀಯ ಸಮುದಾಯ ಏನೆಲ್ಲಾ ಸರ್ಕಸ್ ಮಾಡಿದರೂ ವರ್ಕೌಟ್ ಆಗುತ್ತಿಲ್ಲ ಎನ್ನುವುದೇ ದುರಂತದ ಸಂಗತಿ.












Click it and Unblock the Notifications