ನೇಪಾಳದ ದೇಗುಲ ಬಿಟ್ಟ ಕನ್ನಡಿಗ ಅರ್ಚಕರು
ಉಡುಪಿ, ಸೆ.22 : ಪುರಾಣ ಪ್ರಸಿದ್ಧ ಪಶುಪತಿನಾಥ ದೇಗುಲದ ಮುಖ್ಯ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಂದಾಪುರ ಮೂಲದ ಮಹಾಬಲೇಶ್ವರ ಭಟ್ಟರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಕರ್ನಾಟಕದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬೆಳ್ವೆ ಮೂಲದವರಾದ ಮಹಾಬಲೇಶ್ವರ ಭಟ್ಟರು. ಪಶುಪತಿನಾಥ ಪ್ರದೇಶ ಅಭಿವೃದ್ಧಿ ಟ್ರಸ್ಟ್ ಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಭಟ್ಟರ ರಾಜೀನಾಮೆ ಪತ್ರವನ್ನು ನೇಪಾಳ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯಕ್ಕೆ ಕಳುಹಿಸಲಾಗಿದ್ದು ರಾಜೀನಾಮೆ ಅಂಗೀಕೃತವಾಗಿದೆ ಎಂದು ತಿಳಿದು ಬಂದಿದೆ. ಮಹಾಬಲೇಶ್ವರ ಭಟ್ಟರು ಕಳೆದ 21 ವರ್ಷಗಳಿಂದ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು.
5ನೇ ಶತಮಾನದ ಈ ದೇಗುಲದಲ್ಲಿ ಶತ ಶತಮಾನಗಳಿಂದ ಕರ್ನಾಟಕ ಮೂಲದವರೇ ಪೂಜೆ ಮಾಡುವ ಸಂಪ್ರದಾಯವಿದೆ. ಮಹಾಬಲೇಶ್ವರ ಭಟ್ಟರ ತಂದೆ-ತಾಯಿಗೆ ವಯಸ್ಸಾಗಿದ್ದು, ಅವರ ಸೇವೆ ಮಾಡುವ ಅಗತ್ಯವಿರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2008ರಲ್ಲಿ ಮಾವೋ ಸರ್ಕಾರ ಮಹಾಬಲೇಶ್ವರ ಭಟ್ಟರ ಬದಲು ನೇಪಾಳ ಮೂಲದ ಅರ್ಚಕರನ್ನೇ ದೇಗುಲಕ್ಕೆ ನೇಮಿಸಲು ಮುಂದಾಗಿತ್ತು. ಈ ವೇಳೆ ಅವರು ರಾಜೀನಾಮೆ ನೀಡಿದಾಗ, ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಸರ್ಕಾರ ಸುಮ್ಮನಾಗಿತ್ತು.
ರಾಜಿನಾಮೆ ನೀಡಿದ ತಕ್ಷಣ ಭಟ್ಟರು ಅಲ್ಲಿಂದ ಹೊರಡುವುದು ಸಾಧ್ಯವಿಲ್ಲ. ಮುಂದೆ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವವರಿಗೆ ದೀಕ್ಷೆ ಕೊಟ್ಟು ಅವರಿಗೆ ಪೂಜಾ ಕೈಂಕರ್ಯದ ಅಧಿಕಾರ ಹಸ್ತಾಂತರಿಸಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಎರಡು ತಿಂಗಳ ಸಮಯಾವಕಾಶ ಬೇಕಾಗುತ್ತದೆ.












Click it and Unblock the Notifications